ಬೆಳಗಾವಿ: ಕಳೆದ ವಾರ ಮುಂಬೈನಿಂದ ಜಿಲ್ಲೆಗೆ ಮರಳಿದ್ದ 7 ತಿಂಗಳ ಗರ್ಭಿಣಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.
ಮೇ.3 ರಂದು ಮುಂಬೈನಿಂದ ಬಾಡಿಗೆ ಕಾರ್ನಲ್ಲಿ ಗರ್ಭಿಣಿ ಬೆಳಗಾವಿಗೆ ಆಗಮಿಸಿದ್ದರು. ರಾಜ್ಯ ಪ್ರವೇಶಿಸಲು ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಗರ್ಭಿಣಿ ಮೂರು ಗಂಟೆಗಳ ಕಾಲ ಕಾದಿದ್ದರು. ಪಾಸ್ ಪಡೆಯಲು ಪೊಲೀಸರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಂಪರ್ಕಕ್ಕೂ ಗರ್ಭಿಣಿ ಬಂದಿದ್ದಾರೆ ಎನ್ನಲಾಗುತ್ತಿದೆ.
ಗರ್ಭಿಣಿ ಎಂಬ ಕಾರಣಕ್ಕೆ ಜಿಲ್ಲಾಡಳಿತ ಹೋಮ್ ಕ್ವಾರಂಟೈನ್ ಗೆ ಅವಕಾಶ ನೀಡಿತ್ತು. ನಿನ್ನೆ ಸಂಜೆಯವರೆಗೂ ಬೆಳಗಾವಿಯ ಸದಾಶಿವ ನಗರದಲ್ಲಿ ಗರ್ಭಿಣಿ, ತನ್ನ ತಂದೆ ಹಾಗೂ ಕುಟುಂಬಸ್ಥರು ಸೇರಿದಂತೆ ಕಾಲೋನಿ ಜನರಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಗರ್ಭಿಣಿಯಿಂದಾಗಿ ಬೇರೆ ಯಾರಿಗಾದರೂ ಕೊರೊನಾ ಸೋಂಕು ತಗುಲಿದೆಯೇ ಎಂಬ ಕಾರಣಕ್ಕೆ ಆಕೆಯ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದ್ದು, ಗರ್ಭಿಣಿಗೆ ಕೋವಿಡ್ ವಾರ್ಡ್ ಗೆ ಕರೆ ತಂದು ಚಿಕಿತ್ಸೆ ಕೈಗೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಸದಾಶಿವ ನಗರಕ್ಕೆ ಭೇಟಿ ನೀಡಿ ಸ್ಥಳೀಯರ ಮಾಹಿತಿ ಕಲೆ ಹಾಕುತ್ತಿದ್ದಾರೆ.