ಬೆಳಗಾವಿ: ಕಳೆದ 5 ದಿನಗಳಿಂದ ಆಹಾರ-ನೀರು ಇಲ್ಲದೇ ಅಶಕ್ತವಾಗಿ ಮಲಗಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತರು ಉಪಚರಿಸಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿರುವ ಘಟನೆ ಬೆಳಗಾವಿಯ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಹಲಗಾ ಬಳಿಯ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಬದಿಗೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಕಳೆದ 5 ದಿನಗಳಿಂದ ಒಂದೇ ಸ್ಥಳದಲ್ಲಿ ಮಲಗಿಕೊಂಡಿದ್ದರು. ಆದ್ರೆ, ಕೊರೊನಾ ವೈರಸ್ಗೆ ಹದರಿದ್ದ ಜನರು ಈತನ ಬಳಿ ಹೋಗಲು ಭಯಪಟ್ಟಿದ್ದಾರೆ. ಐದು ದಿನಗಳಿಂದ ಒಂದೇ ಸ್ಥಳದಲ್ಲೇ ಮಲಗಿಕೊಂಡಿದ್ದರಿಂದ ವ್ಯಕ್ತಿಯ ಕುರಿತು ಹಿರೇಬಾಗೆವಾಡಿ ಪಿಎಸ್ಐ ಹಾಗೂ ಫುಡ್ ಫಾರ್ ಸಂಘಟನೆಯ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಆನಗೋಳಕರ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಹಾಗೂ ಫುಡ್ ಫಾರ್ ಸಂಘಟನೆಯ ಕಾರ್ಯಕರ್ತರು ಆತನನ್ನು ವಿಚಾರಿಸಿದಾಗ ವ್ಯಕ್ತಿ ಕಳೆದ ಐದು ದಿನಗಳಿಂದ ಊಟವಿಲ್ಲದೇ ಮಲಗಿಕೊಂಡಿರುವುದು ಬೆಳಕಿಗೆ ಬಂದಿದೆ. ಜತೆಗೆ ಆತನ ಬಲಗಾಲಿಗೆ ಗಂಭೀರ ಗಾಯವಾದ ಪರಿಣಾಮ ನಡೆದಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಹೈವೆ ಪೊಲೀಸ್ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ ಸಾರ್ಥಕತೆ ಮೆರೆದಿದ್ದಾರೆ.