ಚಿಕ್ಕೋಡಿ: ತಾನು ಓಡಿಸುತ್ತಿದ್ದ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಸ್ನೇಹಿತ ಸತ್ತ ನಂತರ ಆರೋಪ ತನ್ನ ಮೇಲೆ ಬರುತ್ತದೆ ಎಂದು ಯುವಕನೊಬ್ಬ ಶವವನ್ನು ಪೊದೆಯಲ್ಲಿ ಎಸೆದುಬಂದ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಬಾಬು ಮುಲ್ತಾನಿ (21) ಮೃತ. ರಮೇಶ್ ಕುಗಟೋಳಿ ಪೊದೆಯಲ್ಲಿ ಶವ ಎಸೆದುಬಂದ ವ್ಯಕ್ತಿ.ರೋಡ್ ಹಂಪ್ ದಾಟುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್ನಿಂದ ಬಿದ್ದ ಬಾಬು, ಚಕ್ರದಡಿ ಸಿಲುಕಿ ಸಾವಿಗೀಡಾಗಿದ್ದಾನೆ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಬಗೆದು ರಮೇಶ ಶವವನ್ನು ಪೊದೆಯಲ್ಲಿ ಎಸೆದು ಬಂದಿದ್ದಾನೆ. ಆದರೂ, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಿದ್ದೇನು?: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗಿದ್ದ ರಮೇಶ್ ಕುಗಟೋಳಿ ಹಾಗೂ ಆತನ ಸ್ನೇಹಿತ ಬಾಬು ಮುಲ್ತಾನಿ ಕಬ್ಬನ್ನು ಕಾರ್ಖಾನೆಯಲ್ಲಿ ಅನ್ ಲೋಡ್ ಮಾಡಿ ವಾಪಸ್ ಮನೆಗೆ ತೆರಳುವಾಗ ಮುಂದೆ ಕುಳಿತಿದ್ದ ಬಾಬು ಆಯತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ಈ ಆರೋಪ ತನ್ನ ಮೇಲೆ ಬರುತ್ತದೆ ಎಂದು ಭಾವಿಸಿದ್ದ ರಮೇಶ್ ಆತನ ಶವವನ್ನು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಬಳಿ ಇರುವ ಪೊದೆಯೊಂದರಲ್ಲಿ ಎಸೆದು ಮನೆಗೆ ಬಂದು ಸುಮ್ಮನೆ ಇದ್ದುಬಿಟ್ಟಿದ್ದ.
ಬಾಬು ತೀರಿ ಹೋಗಿ ವಾರ ಕಳೆದರೂ ಮನೆಯವರಿಗೆ ರಮೇಶ್ ವಿಷಯ ತಿಳಿಸಲಿಲ್ಲ. ಬಾಬು ಮನೆಗೆ ಬಾರದಿದ್ದರಿಂದ ಕುಟುಂಬದವರು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ತನಿಖೆ ಬಳಿಕ ಪೊಲೀಸರು ಸತ್ಯಾಂಶ ಹೊರಗೆಳೆದಿದ್ದಾರೆ. ಉದ್ದೇಶಪೂರ್ವಕವಲ್ಲದಿದ್ದರೂ ಶವವನ್ನು ಪೊದೆಗೆ ಎಸೆದು ರಮೇಶ್ ಸಂಕಷ್ಟಕ್ಕೆ ಸಿಲುಕಿದ್ದಾನೆ.