ಬೆಳಗಾವಿ: ತಾನು ಸ್ವಾಮೀಜಿ ಎಂದು ಹೇಳಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ಯುವಕನಿಗೆ ವಂಚನೆ, ಹಲ್ಲೆ ನಡೆಸಿರುವ ಆರೋಪಿಯನ್ನು ಮೂಡಲಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಎಂಬುವರೇ ಬಂಧಿತ ಆರೋಪಿ.
ಬಂಧಿತ ಆರೋಪಿ ಅಲ್ಲಮಪ್ರಭು ಸ್ವಾಮೀಜಿಯಂತೆ ಪೋಸ್ ಕೊಟ್ಟು ಜನರನ್ನು ವಂಚಿಸುತ್ತಿದ್ದರು. ಕಳೆದ 6 ತಿಂಗಳ ಹಿಂದೆ ಎಸ್‌ಸಿ ಕೋಟಾದಡಿ 'ಡಿ' ದರ್ಜೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮೂಡಲಗಿ ಪಟ್ಟಣದ ನಿವಾಸಿ ಸಂತೋಷ ಹವಳೆವ್ವಗೋಳ ಎಂಬಾತನಿಂದ 4 ಲಕ್ಷ ರೂ. ಪಡೆದಿದ್ದರು. ಯುವಕನಿಗೆ ಕೆಲಸ ಸಿಗದಿದ್ದಾಗ ಹಣ ವಾಪಸ್ ಕೇಳಿದ್ದಾನೆ. ಆದರೆ ಆರೋಪಿಯು ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 15ರಂದು ಹಣ ಕೇಳಲು ಹೋದ ಸಂತೋಷ ಮೇಲೆ ತಮ್ಮ ಸಂಗಡಿಗರ ಜೊತೆಗೂಡಿ ಅಲ್ಲಮಪ್ರಭು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಯುವಕನ ಬೆನ್ನು, ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಲಾಗಿದೆ.
ಇವಿಎಂ ಹ್ಯಾಕ್ ಮಾಡಿ ಗೆಲ್ಲಿಸಿ ಕೊಡುವುದಾಗಿ ವಂಚನೆ: ಇದಲ್ಲದೇ ಆರೋಪಿಯು ಈ ಹಿಂದೆಯೇ ಅಲ್ಲಮಪ್ರಭು ವಿರುದ್ಧ ಮತ್ತೊಂದು ವಂಚನೆ ದೂರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಂಗಳೂರು ಬಿಬಿಎಂಪಿ ಚುನಾವಣೆ ವೇಳೆ ಇವಿಎಂ ಹ್ಯಾಕ್ ಮಾಡಿ ಗೆಲ್ಲಿಸಿಕೊಡುವುದಾಗಿ 5 ಲಕ್ಷ ರೂ. ಹಣ ಪಡೆದ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರು ನಿವಾಸಿ ಪ್ರಶಾಂತಕುಮಾರ ನೀಡಿದ ದೂರಿನ ಮೇರೆಗೆ ಅಲ್ಲಮಪ್ರಭು ವಿರುದ್ಧ ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಪತ್ನಿಯ ಮೇಲಿನ ಸಂಶಯದಿಂದ ಇಬ್ಬರು ಮಕ್ಕಳನ್ನು ಕೊಂದ ಪತಿ