ಬೆಳಗಾವಿ: ಕಳೆದ 15 ದಿನಗಳಿಂದ ವಿದೇಶಿ ಪ್ರಜೆಯೊಬ್ಬ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದಾನೆ. ಬೆಳಗಾವಿ ಹೊರವಲಯದ ಕಣಬರ್ಗಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಈ ಆಸಾಮಿ ಬರಿಗಾಲಲ್ಲಿ ಓಡಾಡುತ್ತಿದ್ದಾನೆ. ಈತ ಹುಚ್ಚನೋ, ಬುದ್ಧಿವಂತನೋ ಎಂಬ ಗೊಂದಲದಲ್ಲಿ ಸ್ಥಳೀಯರಿದ್ದಾರೆ.
ಕಾಲಲ್ಲಿ ಚಪ್ಪಲಿ ಇಲ್ಲ, ಕೈಯಲ್ಲಿ ದೊಣ್ಣೆ, ಚೀಲ ಹಿಡಿದುಕೊಂಡು ತಿರುಗುತ್ತಿರುವ ಈತ ಬಾಯ್ತುಂಬಾ ಇಂಗ್ಲಿಷ್ ಮಾತನಾಡುತ್ತಾನೆ. ಯಾರು ನೀನು ಎಂದು ಪ್ರಶ್ನಿಸಿದ್ರೆ 'ಐ ಆ್ಯಮ್ ಗಾಡ್' ಎಂದು ಪ್ರತಿಕ್ರಿಯೆ ನೀಡುತ್ತಾನೆ. ಎಲ್ಲಿಯವನು ಎಂದು ಕೇಳಿದ್ರೆ 'ಹೆವೆನ್' ಅಂತ ಹೇಳ್ತಿದ್ದಾನೆ. ಜರ್ಮನಿಯಿಂದ 350 ದಿವಸಗಳ ಹಿಂದೆ ಬಂದಿದ್ದೇನೆ. ಮೊದಲು ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರು, ಗೋವಾಗೆ ಭೇಟಿ ನೀಡಿದ್ದೆ. ಇದೀಗ ಕಣಬರ್ಗಿಗೆ ಬಂದಿದ್ದೇನೆ ಎನ್ನುತ್ತಿದ್ದಾನೆ.
ಪಾಸ್‌ಪೋರ್ಟ್, ವೀಸಾ ಎಲ್ಲಿ ಎಂದು ಕೇಳಿದ್ರೆ ನನ್ ಗರ್ಲ್ ಫ್ರೆಂಡ್ ಬಳಿ ಇದೆ ಎಂದು ಈ ಆಸಾಮಿ ಹೇಳ್ತಿದ್ದಾನೆ. ಬೆಳಗಾವಿ ತಾಲೂಕಿನ ಕಣಬರಗಿ ಪ್ರದೇಶದಲ್ಲಿ ಓಡಾಡುತ್ತಿರುವ ಈತ ರಾತ್ರಿ ಬಸ್ ನಿಲ್ದಾಣದಲ್ಲಿ ಮಲಗುತ್ತಾನೆ. ಹಗಲಲ್ಲಿ ಇಡೀ ಗ್ರಾಮದಲ್ಲಿ ಸುತ್ತಾಡುತ್ತಿದ್ದಾನೆ. ಇನ್ನು ಸ್ಥಳೀಯರು ಈತ ವಿದೇಶಿಗ ಅನ್ನೋ ಕಾರಣಕ್ಕೆ ರೊಟ್ಟಿ, ಚಪಾತಿ ಬದಲು ಬ್ರೆಡ್, ಹಣ್ಣು ನೀಡುತ್ತಿದ್ದಾರೆ. ಇನ್ನು ಇವನು ಸ್ಥಳೀಯರ ಮೊಬೈಲ್ ಪಡೆದು ವಾಟ್ಸಪ್ ಮೂಲಕ ಜರ್ಮನಿಯಲ್ಲಿರುವ ಪತ್ನಿಯೊಂದಿಗೆ ಮಾತನಾಡುತ್ತಾನೆ.
ಈತನಿಗೆ ಬಟ್ಟೆ, ಹಾಸಿಗೆ ನೀಡಿ ಸ್ಥಳೀಯರು ಮಾನವೀಯತೆ ಮೆರೆಯುತ್ತಿದ್ದಾರೆ. ಆದರೆ ಯಾವುದೇ ವೀಸಾ, ಪಾಸ್‌ಪೋರ್ಟ್ ಇಲ್ಲದೆ ಓಡಾಡುತ್ತಿರುವ ಈತನನ್ನು ವಶಕ್ಕೆ ಪಡೆದು ವಿಚಾರಿಸಲು ಪೊಲೀಸರು ಮುಂದಾಗುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ನಾಗಾಲ್ಯಾಂಡ್ನ ಡುಕೌ ಕಣಿವೆಯಲ್ಲಿ ಕಾಡ್ಗಿಚ್ಚು : ಎನ್ಡಿಆರ್ಎಫ್ನ ಸಹಾಯಕ ಸಬ್ಇನ್ಸ್ಪೆಕ್ಟರ್ ಸಾವು