ಅಥಣಿ(ಬೆಳಗಾವಿ): ಪ್ರತಿವರ್ಷವೂ ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ರೈತ ಶ್ರಮಪಟ್ಟು ತಾನೇ ಬೆಳೆಸಿದ ದ್ರಾಕ್ಷಿ ಗಿಡಗಳನ್ನು ಕೈಯಾರೆ ಕೊಡಲಿಯಿಂದ ಕಡಿದು ನಾಶ ಪಡಿಸಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.
ಕೋಕಟನೂರ ಗ್ರಾಮದ ಮಹದೇವ ಬಣಜ ಎಂಬ ರೈತ ಕಳೆದ ನಾಲ್ಕು ವರ್ಷಗಳಿಂದ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ಗಿಡಗಳನ್ನು ನಾಶ ಪಡಿಸಿದ್ದಾರೆ. ಚಿಕ್ಕ ಮಗುವಿನಂತೆ ದ್ರಾಕ್ಷಿ ಬೆಳೆಯನ್ನು ಪೋಷಿಸಿ ಬೆಳೆಸಿದ್ದರು. ಆದರೆ ಪ್ರತಿ ವರ್ಷ ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆ ಮತ್ತು ಒಣದ್ರಾಕ್ಷಿಗೆ ಅತಿ ಕಡಿಮೆ ಬೆಲೆ ನಿಗದಿಯಿಂದ ರೈತ ಕಂಗೆಟ್ಟು ಕುಟುಂಬ ವರ್ಗದವರೊಂದಿಗೆ ಸೇರಿ ದ್ರಾಕ್ಷಿ ಗಿಡಗಳನ್ನು ನಾಶ ಪಡಿಸಿದ್ದಾರೆ.
ಪ್ರತಿ ವರ್ಷ ಒಂದು ಎಕರೆ ದ್ರಾಕ್ಷಿ ಬೆಳೆ ಬೆಳೆಯುವುದಕ್ಕೆ ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಆಗುತ್ತದೆ, ಅಷ್ಟು ಖರ್ಚಾದರೂ ನಮಗೆ ಲಾಭ ಒಂದೇ ಒಂದು ರೂಪಾಯಿ ಬರುತ್ತಿಲ್ಲ, ಕುಟುಂಬ ವರ್ಗದವರು ಸೇರಿ ದುಡಿದರೂ ಯಾವುದೇ ಲಾಭವಿಲ್ಲ. ಸರ್ಕಾರ ಪರಿಹಾರ ನೀಡುತ್ತದೆ. ಆದ್ರೆ ಅದು ಔಷದಿ ಸಿಂಪಡಣೆಗು ಸಾಲುತ್ತಿಲ್ಲ. ಇದರಿಂದಾಗಿ ನಾವು ಮನನೊಂದು ಒಲ್ಲದ ಮನಸಿನಿಂದ ಅನಿವಾರ್ಯವಾಗಿ ದ್ರಾಕ್ಷಿ ಬೆಳೆ ನಾಶ ಪಡಿಸಿದ್ದೇವೆ ಎಂದು ರೈತ ಮಹಿಳೆ ರೂಪಾ ಮಹಾದೇವ ಬಣಜ್ ತಮ್ಮ ನೋವನ್ನು ತೋಡಿಕೊಂಡರು.
ಇದನ್ನೂ ಓದಿ; ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿಂದು ತರಕಾರಿ ಬೆಲೆ ಹೀಗಿದೆ..