ಚಿಕ್ಕೋಡಿ : ಭೀಕರ ಬರಗಾಲದ ನಡುವೆ ಬೆಳೆಗಳಿಗೆ ಟ್ಯಾಂಕರ್ ಮುಖಾಂತರ ನೀರು ಹಾಯಿಸಿ ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸಿ ಇತರ ರೈತರಿಗೆ ಸಂಬರಗಿ ಗ್ರಾಮದ ಅನ್ನದಾತ ಪ್ರೇರಣೆಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಮಾಣಿಕ ಅವಳೆಕರ ಎಂಬ ರೈತ ನೀರಿನ ಅಭಾವದ ನಡುವೆ ಕುಗ್ಗದೇ ಟ್ಯಾಂಕರ್ ಮೂಲಕ ಬೆಳೆಗೆ ನೀರು ಪೂರೈಸಿ, ಐದು ಎಕರೆ ಪ್ರದೇಶದಲ್ಲಿ ತಂತ್ರಜ್ಞಾನ ಬಳಸಿ, ಕ್ಯಾಪ್ಸಿಕಂ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ. ಈ ಮೂಲಕ ಇನ್ನುಳಿದ ರೈತರಿಗೆ ಮಾದರಿಯಾಗಿದ್ದಾರೆ.
ವಾಡಿಕೆಯಂತೆ ಈ ವರ್ಷ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಂಪೂರ್ಣ ಮಳೆ ಕೈಕೊಟ್ಟ ಹಿನ್ನೆಲೆ ಕುಡಿಯುವ ನೀರಿಗೂ ಕೆಲವು ರೈತರು ಸಂಕಷ್ಟಪಡುತ್ತಿದ್ದಾರೆ. ಈ ಮಧ್ಯದಲ್ಲಿ ಮಳೆಯನ್ನೇ ನಂಬಿಕೊಂಡು 5 ಎಕರೆ ಪ್ರದೇಶದಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದು ರೈತರು ಆದಾಯ ಗಳಿಸುವುದಕ್ಕೆ ಮುಂದಾಗಿದ್ದರು. ಆದರೆ, ಹಿಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ನೀರಿನ ಅಭಾವ ಕಾಣುತ್ತಿದ್ದಂತೆ ರೈತ ಯಾವುದಕ್ಕೂ ಎದೆಗುಂದದೇ ಟ್ರ್ಯಾಕ್ಟರ್ ಸಹಾಯದಿಂದ ಟ್ಯಾಂಕರ್ ಮುಖಾಂತರ ಹತ್ತು ಕಿಲೋಮೀಟರ್ ದೂರದಿಂದ ನೀರು ತಂದು ಮೆಣಸಿನಕಾಯಿ ಗಿಡಗಳಿಗೆ ನೀರು ಹಾಯಿಸಿದ್ದಾರೆ. ಪರಿಶ್ರಮಕ್ಕೆ ತಕ್ಕಂತೆ ಸದ್ಯ 18 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ನಾಟಿ ಮಾಡಿದ ಬೆಳೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದು, ಮಲ್ಚಿಂಗ್ ಪ್ಲಾಸ್ಟಿಕ್ ಅಳವಡಿಸಿ ಕೃಷಿಯಲ್ಲಿ ಲಾಭದಾಯಕ ಬೆಳೆ ಬೆಳೆಯುತ್ತಿದ್ದಾರೆ.
ಐದು ಎಕರೆ ಪ್ರದೇಶದಲ್ಲಿ 60 ಸಾವಿರ ಸಸಿಗಳನ್ನು ನಾಟಿ ಮಾಡಿ ಸರಿಯಾಗಿ ಪೋಷಿಸಿ ಮೂರು ಹಂತಗಳಲ್ಲಿ ಮೆಣಸಿನಕಾಯಿ ಕಟಾವು ಕಾರ್ಯ ಮುಗಿದಿದೆ. ಒಟ್ಟು 45 ಟನ್ ಆಗುವಷ್ಟು ಮೆಣಸಿನಕಾಯಿ ಮಾರುಕಟ್ಟೆಗೆ ರಪ್ತು ಮಾಡಲಾಗಿದೆ. ಇದರಿಂದ 18 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಇನ್ನೂ ಹತ್ತರಿಂದ ಹನ್ನೆರಡು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ. 5 ಎಕರೆ ಪ್ರದೇಶದಲ್ಲಿ ಮೆಣಸಿನ ಕಾಯಿ ಬೆಳೆಯಲು ಸರಿ ಸುಮಾರು 7 ಲಕ್ಷ ರೂ. ಖರ್ಚು ಮಾಡಿದ್ದು, ಸದ್ಯ ಈಗ ಬರಗಾಲದ ನಡುವೆಯೂ ಕೈತುಂಬ ಆದಾಯ ಪಡೆದುಕೊಂಡು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಸಹಾಯದಿಂದ ಮಹಾರಾಷ್ಟ್ರ, ಬೆಳಗಾವಿ, ಹೈದರಾಬಾದ್, ಬಾಂಬೆ, ಚೆನ್ನೈ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆಜಿಗೆ 35 ರಿಂದ 40 ರೂಪಾಯಿ ಮಾರುಕಟ್ಟೆಯಲ್ಲಿ ದರ ಇರುವುದರಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇಂಥ ಬರಗಾಲದ ವಾತಾವರಣದ ನಡುವೆಯೂ ರೈತ ಯಾವುದಕ್ಕೂ ಎದೆಗುಂದದೇ ಚಿನ್ನದಂತ ಬೆಳೆ ಬೆಳೆದು ಸದ್ಯದ ಮಟ್ಟಿಗೆ ಕೈ ತುಂಬಾ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಇನ್ನುಳಿದ ರೈತರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ : ದೊಡ್ಡ ಮೆಣಸಿನಕಾಯಿಗೆ 'ಚಿಕ್ಕ ಬೆಲೆ'... ಡಿಸಿಎಂ ಸ್ವಕ್ಷೇತ್ರದಲ್ಲಿ ಕ್ಯಾಪ್ಸಿಕಂ ಬೆಳೆ ನಾಶಗೊಳಿಸಿದ ರೈತ