ಚಿಕ್ಕೋಡಿ/ಬೆಳಗಾವಿ: ಶಂಕ್ರೆಪ್ಪ ಮಡಿವಾಳರ ಎಂಬುವವರು ಸಾವನ್ನಪ್ಪಿದ್ದು, ಅವರ ನೆನೆಪಿನಲ್ಲಿಯೇ ಅನ್ನ-ನೀರು ತ್ಯಜಿಸಿ ತನ್ನ ಮಾಲೀಕ ಸುತ್ತಾಡಿದ ಸ್ಥಳಗಳಲ್ಲಿ ಸುತ್ತಾಡಿ ಶ್ವಾನವೊಂದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.
ಅವರಾದಿ ಗ್ರಾಮದ ಶಂಕ್ರೆಪ್ಪ ಮಡಿವಾಳರ ಒಂದು ಶ್ವಾನ ಸಾಕಿದ್ದರು. ಅದಕ್ಕೆ ಪ್ರೀತಿಯಿಂದ ಕಡ್ಡಿ ಎಂದು ನಾಮಕರಣ ಮಾಡಿದ್ದು, ಸೆಪ್ಟೆಂಬರ್ 6(ಕಳೆದ ಸೋಮವಾರ)ರಂದು ಅವರು ಮೃತಪಟ್ಟಿದ್ದಾರೆ. ಮಾಲೀಕನ ಅಕಾಲಿಕ ನಿಧನದಿಂದ ಬೇಸರಗೊಂಡ ಕಡ್ಡಿ(ಶ್ವಾನ) ತನ್ನ ಮಾಲೀಕ ಸುತ್ತುತ್ತಿದ್ದ ಪ್ರದೇಶವನ್ನೆಲ್ಲಾ ಸುತ್ತಿ ಹುಡುಕಾಟ ನಡೆಸಿ ಕೊನೆಗೆ ಕೊನೆಯುಸಿರೆಳೆದಿದೆ.
ಮಾಲೀಕನ ಅಗಲಿಕೆಯಿಂದ ದಿಕ್ಕು ತೋಚದಂತಾದ 'ಕಡ್ಡಿ'... ಅನ್ನ-ನೀರು ತ್ಯಜಿಸಿದ ಶ್ವಾನ!
ಹಾಲು ಸಂಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಮಾರಾಟ ಮಾಡುತ್ತಿದ್ದ ಶಂಕ್ರೆಪ್ಪ ಅಲ್ಲಿಗೆ ಹೋಗಿರಬಹುದು ಎಂದು ಅಲ್ಲಿಯೂ ಸಹ ಹುಡುಕಾಟ ನಡೆಸಿತ್ತು. ಬೀದಿ ಬೀದಿಯಲ್ಲಿ ತನ್ನ ಮಾಲೀಕನಿಗಾಗಿ ಮೊರೆಯಿಟ್ಟಿತ್ತು. ದುರದೃಷ್ಟವಶಾತ್ ನಿನ್ನೆ (ಸೋಮವಾರ) ಈ ಕಡ್ಡಿ ಮಹಾಲಿಂಗಪುರದಲ್ಲಿ ಶವವಾಗಿ ಪತ್ತೆಯಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶ್ವಾನ ಕಡ್ಡಿಯ ಮೃತದೇಹವನ್ನು ಊರಿಗೆ ತಂದು ಊರಿನ ಪ್ರಮುಖರ ಸಮ್ಮುಖದಲ್ಲಿ ಮೆರವಣಿಗೆ ಮಾಡಿ ಸಕಲ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮಾಲೀಕ ಶಂಕ್ರೆಪ್ಪರವರ ಸಮಾಧಿ ಪಕ್ಕದಲ್ಲೇ ಶ್ವಾನದ ಸಮಾಧಿ ಮಾಡಲಾಗಿದೆ.