ಬೆಳಗಾವಿ: ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದರೂ ಬಾಕಿ ಬಿಲ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮನನೊಂದು ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದಲ್ಲಿ ನಡೆದಿದೆ. ರಾಮಣ್ಣ ಅಡಿವೆಪ್ಪ ಸರಕಪ್ಪಗೋಳ ಶಾಲೆಯ ಕಟ್ಟಡ ಮೇಲೆ ಏರಿ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ.
2015- 16 ರಲ್ಲಿ ಹೈದರಾಬಾದ್ ಮೂಲದ ಕಂಪನಿಯಿಂದ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ಕಾಮಗಾರಿಯನ್ನು ಈ ಗುತ್ತಿಗೆದಾರ ಕೈಗೊಂಡಿದ್ದರು. ಹಣ ಬಿಡುಗಡೆ ವಿಳಂಬವಾಗಿದ್ದರಿಂದ 2022 ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಈಗ ಬಾಕಿ ಬಿಲ್ 23 ಲಕ್ಷ ರೂ ಬಿಡುಗಡೆ ಆಗಿಲ್ಲ. ಸಾಲ ಪಡೆದು ಶಾಲಾ ಕಟ್ಟಡ ಕಟ್ಟಿದ್ದ ಗುತ್ತಿಗೆದಾರನಿಗೆ ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಬೇಸತ್ತು ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಶಾಲೆಯ ಮೇಲೆ ರಾಮಣ್ಣ ಕುಳಿತಿದ್ದರು. ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಒಂದು ಗಂಟೆ ಕಾಲ ಮನವೊಲಿಸಿದ ನಂತರ ಗುತ್ತಿಗೆದಾರ ಕೆಳಗೆ ಇಳಿದಿದ್ದಾರೆ.
ಈ ವೇಳೆ ಮಾತನಾಡಿದ ಗುತ್ತಿಗೆದಾರ ರಾಮಣ್ಣ, ಹೈದರಾಬಾದ್ ಮೂಲದ ಕಂಪನಿ 23 ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. 2015- 16 ರಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದೆ, ಬಿಲ್ ಬಿಡುಗಡೆ ವಿಳಂಬವಾಯಿತು. ಹಾಗಾಗಿ ಕಂಪನಿಯವರು ನಿಧಾನವಾಗಿ ಕಟ್ಟಡ ನಿರ್ಮಿಸುವಂತೆ ಹೇಳಿದರು. ಆ ಪ್ರಕಾರ 2022 ರ ಆಗಸ್ಟ್ನಲ್ಲಿ ಕಟ್ಟಡ ಪೂರ್ಣಗೊಳಿಸಿ ಹಸ್ತಾಂತರ ಮಾಡಿದ್ದೆ. ಈವರೆಗೂ ಕಂಪನಿಯಿಂದ ನನಗೆ ಬಾಕಿ ಬಿಲ್ ಬಂದಿಲ್ಲ ಎಂದು ಆರೋಪಿಸಿದರು.
ಸಾಲ ಮಾಡಿ ಕಾಮಗಾರಿ ಕೈಗೊಂಡಿದ್ದೆ, ಈಗ ಹಣ ನೀಡಿದವರು ಸಾಲ ಮರಳಿಸುವಂತೆ ಪೀಡಿಸುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಪೊಲೀಸರು ಹಣ ಕೊಡಿಸುತ್ತೇವೆ ಎಂದಿದ್ದರಿಂದ ಕೆಳಗೆ ಬಂದಿದ್ದೇನೆ. ಇಲ್ಲದೇ ಹೋದಲ್ಲಿ ಮತ್ತೆ ನಾನು ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗುತ್ತಿಗೆದಾರ ಎಚ್ಚರಿಸಿದರು. ಗೋಕಾಕ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ರಾಜ್ಯಪಾಲರಿಗೆ ಪತ್ರ ಬರೆದ ಗುತ್ತಿಗೆದಾರರಿಗೆ ನೊಟೀಸ್ ನೀಡಿ ವಿಚಾರಣೆಗೊಳಪಡಿಸಿದ ಪೊಲೀಸರು