ಚಿಕ್ಕೋಡಿ: ವೈದ್ಯರಿಗೆ ಧಮಕಿ ಹಾಕಿ ಎರಡು ಲಕ್ಷ ರೂಪಾಯಿ ಬೇಡಿಕೆಯಿಟ್ಟ ಇಬ್ಬರು ವ್ಯಕ್ತಿಗಳ ವಿರುದ್ಧ ವೈದ್ಯ ಶ್ರೀಶೈಲ ಹೊಸಮನಿ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗೋಕಾಕ್ ನಿವಾಸಿಗಳಾದ ಅರೋಪಿ ಭೀಮಶಿ ಬರಮನ್ನವರ ಹಾಗೂ ಹನಮಂತ ದುರ್ಗನ್ನವರ ವಿರುದ್ಧ ಗೋಕಾಕ್ ಪೊಲೀಸರು ಐಪಿಸಿ 384, 341, 504, 506 ಮತ್ತು ಕಲಂ 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದ ರಾಮಚಂದ್ರ ಹರಿಜನ ಎನ್ನುವವರನ್ನು ನಗರದಲ್ಲಿರುವ ನವಜೀವನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಅವರು ಮೃತರಾಗಿದ್ದು, ಅದಕ್ಕೆ ಮೃತನ ಮಗನಾದ ಗೋಪಾಲ ರಾಮಚಂದ್ರ ಹರಿಜನ ಎನ್ನುವರು ವೈದ್ಯರ ನಿರ್ಲಕ್ಷ್ಯದಿಂದಾಗಿ ನನ್ನ ತಂದೆ ಸಾವನ್ನಪ್ಪಿದ್ದಾಗಿ ದೂರು ದಾಖಲಿಸಿದ್ದರು.


ಇದನ್ನೇ ನೆಪ ಮಾಡಿಕೊಂಡು ಆರೋಪಿಗಳಾದ ಭೀಮಶಿ ಮತ್ತು ಹನಮಂತ ವೈದ್ಯ ಶ್ರೀಶೈಲ ಹೊಸಮನಿ ಹತ್ತಿರ ಹೋಗಿ ನಿಮ್ಮ ಮೇಲೆ ಮೃತನ ಮಗ ನೀಡಿರುವ ದೂರನ್ನು ನಾವು ರಾಜಿ ಮಾಡಿಸುತ್ತೇವೆ. ಅದಕ್ಕೆ ನೀವು ಎರಡು ಲಕ್ಷ ರೂಪಾಯಿ ಹಣ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಇನ್ನು ಇದಕ್ಕೆ ವೈದ್ಯ ಶ್ರೀಶೈಲ ನಾನೇಕೆ ನಿಮಗೆ ಹಣ ನೀಡಬೇಕು? ನಾನೇನು ತಪ್ಪು ಮಾಡಿಲ್ಲ? ಎಂದಾಗ ಆರೋಪಿಗಳಿಬ್ಬರು ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಉಪಚಾರ ಮಾಡದಂತೆ ವೈದ್ಯರಿಗೆ ಅಡೆ ತಡೆ ಮಾಡಿ ಅವಾಚ್ಯ ಶಬ್ಧದಿಂದ ಬೈದು ನಿಮ್ಮಿಂದ ಯಾವ ರೀತಿ ಹಣ ವಸೂಲಿ ಮಾಡಬೇಕೆಂದು ಗೊತ್ತು ಎಂದು ಜೋರು ಮಾಡಿ ಧಮಕಿ ಹಾಕಿದ್ದಾರೆ ಎಂದು ವೈದ್ಯ ಶ್ರೀಶೈಲ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಈ ಕುರಿತು ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.