ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 89 ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ನಾಲ್ವರು ಸಿಬ್ಬಂದಿ ಮೃತರಾಗಿದ್ದಾರೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರೊನಾ ಮೊದಲ ಅಲೆಗೆ 20 ಹಾಗೂ ಎರಡನೇ ಅಲೆಗೆ 23 ಜನ ಶಿಕ್ಷಕರು ಮೃತರಾಗಿದ್ದಾರೆ ಎಂದು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಡಾ. ಆನಂದ ಪುಂಡಲೀಕ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ಅಲೆಗೆ 18 ಶಿಕ್ಷಕರು ಹಾಗೂ ಎರಡನೇ ಅಲೆಗೆ 28 ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎರಡನೇ ಅಲೆಗೆ ಶಿಕ್ಷಣ ಇಲಾಖೆಯ ನಾಲ್ವರು ಸಿಬ್ಬಂದಿ ಕೂಡ ಅಸುನೀಗಿದ್ದಾರೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಗಜಾನನ ಮಣ್ಣಿಕೇರಿ ಮಾಹಿತಿ ನೀಡಿದ್ದಾರೆ.
ಕೊರೊನಾ 2ನೇ ಅಲೆ ಕಾಣಿಸಿಕೊಂಡ ನಂತರ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 20 ಮಂದಿ ಶಿಕ್ಷಕರು ಕೋವಿಡ್ ಸೋಂಕಿನಿಂದ ಮರಣ ಹೊಂದಿದ್ದಾರೆ. ಅದರಲ್ಲಿ 10 ಮಂದಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕರ್ತವ್ಯಕ್ಕೆ ಹಾಜರಾಗಿದ್ದರು.
ಪ್ರಸ್ತುತ 53 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರಲ್ಲಿ ಕೆಲವರು ಆಸ್ಪತ್ರೆಯಲ್ಲಿದ್ದಾರೆ. ಕೆಲವರು ಹೋಂ ಐಸೊಲೇಷನ್‌ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಇಒ, ಬಿಆರ್‌ಸಿ, ಸಿಆರ್‌ಪಿಗಳ ಮೂಲಕ ಶಿಕ್ಷಕರಿಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಿ, ಅಗತ್ಯವಿದ್ದರಷ್ಟೇ ಮನೆಗಳಿಂದ ಹೊರ ಬನ್ನಿ.
ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಲವು ಬಾರಿ ಗೂಗಲ್ ಮೀಟ್, ವೆಬಿನಾರ್ ನಡೆಸಿ ಅರಿವು ಮೂಡಿಸಲಾಗಿದೆ ಎಂದು ಡಾ. ಆನಂದ ಪುಂಡಳಿಕ ಮಾಹಿತಿ ನೀಡಿದ್ದಾರೆ.