ಬೆಳಗಾವಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಠಾನ ಕುಂದಾನಗರಿಯಲ್ಲಿ ಚುರುಕುಗೊಂಡಿದ್ದು, ಹೈಟೆಕ್ ಸೌಲಭ್ಯಗಳನ್ನು ಬೆಳಗಾವಿ ಜನತೆಗೆ ಒದಗಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಸೈಕ್ಲಿಂಗ್ ಪ್ರಿಯರಿಗೆ ನಗರದಲ್ಲಿ 43 ಕಿಮೀ ಸೈಕ್ಲಿಂಗ್ ಟ್ರ್ಯಾಕ್ (ಸೈಕಲ್ ಪಥ) ನಿರ್ಮಿಸಲು ನಿರ್ಧರಿಸಲಾಗಿದ್ದು, ಇನ್ಮುಂದೆ ಕುಂದಾನಗರಿಯಲ್ಲೂ ಟ್ರಿನ್ ಟ್ರಿನ್ ಸದ್ದು ಅನುರಣಿಸಲಿದೆ.
ಇದನ್ನೂ ಓದಿ...ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಅವಶ್ಯಕತೆ ಬಿದ್ರೆ ಕೋರ್ಟ್ ಮೊರೆ: ಸತೀಶ್ ಜಾರಕಿಹೊಳಿ
ಸ್ಮಾರ್ಟ್‍ಸಿಟಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನೂರಾರು ಕೋಟಿ ವಿಶೇಷ ಅನುದಾನ ನಗರಕ್ಕೆ ಬಿಡುಗಡೆಯಾಗಿದ್ದು, ನಗರದ ಪ್ರಮುಖ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳಾಗಿ ಪರಿವರ್ತಿಸಲಾಗುತ್ತಿದೆ. ಈ ರಸ್ತೆಗಳ ಬದಿಯಲ್ಲೇ ಸೈಕಲ್ ಪಥ ನಿರ್ಮಿಸಿಲು ಉದ್ದೇಶಿಸಲಾಗಿದೆ. ವಾಯು ಹಾಗೂ ಶಬ್ಧ ಮಾಲಿನ್ಯಕ್ಕೆ ಕಡಿವಾಣ ಹಾಕಲು ಸೈಕಲ್ ಬಳಕೆ ಅನುಕೂಲ ಆಗಲಿದೆ.
ಶೀಘ್ರವೇ ತಲೆ ಎತ್ತಲಿದೆ ಟ್ರಾಕ್ಸ್: ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ಬಳಿಕ ರಸ್ತೆ ಬದಿಯಲ್ಲೇ ಸೈಕಲ್ ಪಥ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈ ಪಥ ಪ್ರತ್ಯೇಕವಾಗಿರಲಿದ್ದು, ಯಾವುದೇ ವಾಹನಗಳ ಅಡೆತಡೆ ಇರುವುದಿಲ್ಲ. ಮೈಸೂರು, ಭುವನೇಶ್ವರ ಮಾದರಿಯಲ್ಲಿ ನಗರದಲ್ಲಿಯೂ ಸೈಕಲ್ ಪಥ ನಿರ್ಮಾಣಗೊಳ್ಳಲಿದೆ ಎಂದು ಸ್ಮಾರ್ಟ್‍ಸಿಟಿ ಎಂಡಿ ಶಶಿಧರ ಕುರೇರ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ನಾಲ್ಕೂವರೆ ಕೋಟಿ ರೂ. ಯೋಜನೆ: ಸ್ಮಾರ್ಟ್‍ಸಿಟಿ ಅಡಿಯಲ್ಲಿ ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ಪಥ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 300 ಸೈಕಲ್ ಖರೀದಿಗೆ ನಿರ್ಮಿಸಲಾಗಿದ್ದು, ಖಾಸಗಿ ಸೈಕಲ್‍ಗಳ ಬಳಕೆಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಸೈಕಲ್ ಬಳಸುವವರ ಸಂಖ್ಯೆಯೂ ಹೆಚ್ಚಾಗಲಿದೆ. ಸಂಚಾರ ದಟ್ಟಣೆಗೂ ಕಡಿವಾಣ ಬೀಳಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸೈಕ್ಲಿಂಗ್ ಜಂಕ್ಷನ್ ಮಾಡಲು ನಿರ್ಧರಿಸಲಾಗಿದ್ದು, ಉದ್ಯಮ ಭಾಗದ ಕೈಗಾರಿಕೆ, ಮಾರುಕಟ್ಟೆ ಪ್ರದೇಶ ಹಾಗೂ ಶಾಲಾ-ಕಾಲೇಜಿಗೆ ಹೋಗಲು ಸೈಕಲ್ ಬಳಸಬಹುದು.
ಇದನ್ನೂ ಓದಿ...ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು: ಸಿದ್ದರಾಮಯ್ಯ
ಬೊಜ್ಜಿಗೆ ಸೈಕ್ಲಿಂಗ್ ಮದ್ದು!: ಸೈಕ್ಲಿಂಗ್ ಮಾಡುವುದರಿಂದ ಬೊಜ್ಜು ಬರುವುದಿಲ್ಲ ಹಾಗೂ ಬೊಜ್ಜು ಕರುಗಿಸಬಹುದು. ಅಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳು ಸೈಕ್ಲಿಂಗ್ ಮಾಡುವುದರಿಂದ ದೂರವಾಗುತ್ತವೆ. ಒಳ್ಳೆಯ ವ್ಯಾಯಾಮವೂ ಆಗಲಿದೆ. ಕಾರು, ಬೈಕ್ ಬಳಕೆಗಿಂತ ಸೈಕಲ್ ಬಳಸುವುದು ಆರೋಗ್ಯ ಹಾಗೂ ಪರಿಸರಕ್ಕೂ ಅನುಕೂಲ ಎಂದು ವೈದ್ಯ ಎಸ್.ಬಿ.ಓಂಕಾರ ಅವರು ಹೇಳಿದ್ದಾರೆ.