ಅಥಣಿ : ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಸಂಭವಿಸಿದೆ.
ಮೃತ ದುರ್ದೈವಿಗಳನ್ನ ಪರಶುರಾಮ ಗೋಪಾಲ ಬನಸೋಡೆ (24), ಧರೇಪ್ಪ ಗೋಪಾಲ ಬನಸೋಡೆ (29), ಸದಾಶಿವ ಬನಸೋಡೆ (22) ಹಾಗೂ ಶಂಕರ ಗೋಪಾಲ ಬನಸೋಡೆ (20) ಎಂದು ಗುರುತಿಸಲಾಗಿದೆ.
ಸದ್ಯ ನಾಲ್ಕು ಜನ ಸಹೋದರರು ಮೃತಪಟ್ಟಿದ್ದು, ಹುಡುಕಾಟಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಎನ್ಡಿಆರ್ಎಫ್ ತಂಡ ಮತ್ತು ಮೀನುಗಾರರು ಶವ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಘಟನೆ ವಿವರ : ಮುಂದಿನ ವಾರ ಗ್ರಾಮದ ದೇವರ ಜಾತ್ರೆ ಇರುವುದರಿಂದ ಮನೆಯನ್ನು ಸ್ವಚ್ಛ ಮಾಡಲು ಹಾಗೂ ಗೃಹ ವಸ್ತುಗಳನ್ನು ನದಿಯಲ್ಲಿ ತೊಳೆಯಲು ಸಹೋದರರು ನದಿಗೆ ಹೋಗಿದ್ದಾರೆ. ಆಗ ಓರ್ವ ಸಹೋದರ ನೀರಿನಲ್ಲಿ ಬಿದ್ದ ತಕ್ಷಣ ಅವನನ್ನು ರಕ್ಷಿಸಲು ಮೂವರು ಮುಂದಾಗಿದ್ದಾರೆ.
ದುರಾದೃಷ್ಟವಶಾತ್ ಕ್ಷಣ ಮಾತ್ರದಲ್ಲಿ ನಾಲ್ಕು ಜನರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಹಾಗೂ ಡಿವೈಎಸ್ಪಿ ಎಸ್ ವಿ ಗಿರೀಶ್ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಯುವಕರ ಶೋಧಕ್ಕೆ NDRF ನೆರವು : ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಯುವಕರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಕಂಬನಿ ಮಿಡಿದಿದ್ದು, ಮೃತದೇಹ ಶೋಧನೆಗೆ NDRF ನೆರವು ಪಡೆದುಕೊಳ್ಳಲಾಗುತ್ತಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ನಿರಂತರವಾಗಿ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಸೂಕ್ತ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಓದಿ: ಕಾಂಗ್ರೆಸ್ ಮನೆಯಲ್ಲಿ ನಾಲ್ಕು ಬಾಗಿಲು: ಸಚಿವ ಆರ್. ಅಶೋಕ್ ವ್ಯಂಗ್ಯ