ಬೆಳಗಾವಿ: ರಾಜಸ್ಥಾನದ ಅಜ್ಮೀರ್‌ಗೆ ತೆರಳಿ ರಾಜ್ಯಕ್ಕೆ ಮರಳಿದ 38 ಯಾತ್ರಾರ್ಥಿಗಳ ಪೈಕಿ 30 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಪುಣೆ-ಬೆಂಗಳೂರು ಎನ್‌ಎಚ್-4 ಮಾರ್ಗವಾಗಿ ಕರ್ನಾಟಕದ ಗಡಿ ಪ್ರವೇಶಿಸಿದ್ದರು.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿಯ ಚೆಕ್ ಪೋಸ್ಟ್‌ಗೆ ಮೇ 2 ರ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ್ದ ಇವರು ಬರೋಬ್ಬರಿ 8 ಗಂಟೆಗಳ ಕಾಲ ಅದೇ ಚೇಕ್ ಪೋಸ್ಟ್ ಬಳಿ ನಿಂತಿದ್ದರಂತೆ. ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡುತ್ತಾ ಕಾಲಹರಣ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಇವರು ಪೊಲೀಸರು ಹಾಗೂ ವಾಹನ ಸವಾರರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಗಳಿವೆ.
ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದ ಊಟದ ಹಾಲ್ನಲ್ಲಿ 100ಕ್ಕೂ ಅಧಿಕ ಜನರ ಜೊತೆಗೆ ಕುಳಿತು ಇದೇ ಮಂದಿ ಊಟ ಮಾಡಿದ್ದರು. ಊಟ ಮುಗಿಸಿದ ಯಾತ್ರಿಕರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಇದೀಗ ಈ 38 ಜನರ ಪ್ರಾಥಮಿಕ ಸಂಪರ್ಕ ಹುಡುಕುವುದೇ ಸವಾಲಾಗಿದೆ.
ರಾಜ್ಯ ಪ್ರವೇಶಿಸಲು ಅನುಮತಿ ನೀಡದೇ ಇದ್ದಾಗ ಇವರಲ್ಲಿ ಕೆಲವರು ಮಹಾರಾಷ್ಟ್ರದ ಕಾಗಲ್‌ಗೆ ವಾಪಸ್ ತೆರಳಿದ್ದಾರೆ. ಪೊಲೀಸರು ಪಾಸ್ ಇದ್ದರೂ ಅನುಮತಿ ನೀಡುತ್ತಿಲ್ಲವೆಂದು ಕಾಗಲ್‌ಗೆ ಹೋಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.