ಬೆಳಗಾವಿ: ನಗರದ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಯುವತಿಯರ ಜೊತೆಗೆ ಬೆಳಗಾವಿ ಮೂಲದ ಓರ್ವ ಯುವತಿ ಕರ್ನಾಟಕ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕುಂದಾನಗರಿಯಲ್ಲಿ ಈ ಯುವತಿಯರ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಬೆಳಗಾವಿಯ ಒಟ್ಟು ಆರು ಯುವ ಮಹಿಳಾ ಫುಟ್ಬಾಲ್ ಆಟಗಾರರು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಶನ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಕೆಎಲ್ಇ ಲಿಂಗರಾಜ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಇಲ್ಲಿನ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಂಜಲಿ ಹಿಂಡಲಗೇಕರ ಮತ್ತು ಅಕ್ಷತಾ ಚೌಗಲೆ, ಜೊತೆಗೆ ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳಗಾವಿಯ ಪ್ರಿಯಾಂಕಾ ಕಾಂಗ್ರಾಳಕರ ರಾಜ್ಯ ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಆಟಗಾರ್ತಿಯರಾಗಿದ್ದಾರೆ.
ಇದೇ ಸೆಪ್ಟಂಬರ್ 10 ರಿಂದ 16 ರವರೆಗೆ ಅರುಣಾಚಲ ಪ್ರದೇಶದಲ್ಲಿ ನಡೆಯಲಿರುವ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ಈ ಆಟಗಾರ್ತಿಯರು ಬೆಂಗಳೂರಿನ ತನ್ವಿ ಹ್ಯಾಂಚ್ ನೇತೃತ್ವದ, ಕರ್ನಾಟಕ ಹಿರಿಯರ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ರಾಜ್ಯ ತಂಡದ 11 ಆಟಗಾರರಲ್ಲಿ ಈ ಮೂವರು ಪ್ರವೇಶ ಪಡೆದಿದ್ದು ಜೊತೆಗೆ, ತಂಡಕ್ಕೆ ಕಾಯ್ದಿರಿಸಿದ ಆಟಗಾರರಾಗಿ ಬೆಳಗಾವಿಯವರೇ ಆದ ಅದಿತಿ ಜಾಧವ್, ಉಮಾಶ್ರೀ ಚಂಡಿಲ್ಕರ ಮತ್ತು ಸ್ವರಾಂಜಲಿ ಜಾಧವ್ ಸ್ಥಾನ ಪಡೆದಿದ್ದಾರೆ.