ಬೆಳಗಾವಿ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ 7.39 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಹಾಗೂ ಲಾರಿ ಸಮೇತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೈಲಹೊಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಪತೇಶ ನಗರದ ಜಮಾಲಖಾನ ಪಠಾಣ, ದಿಲಾವರಖಾನ ಪಠಾಣ ಹಾಗೂ ಮಂಜುನಾಥ ಹರ್ಲಾಪೂರ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ನಿನ್ನೆ ಬೈಲಹೊಂಗಲ-ಬೆಳಗಾವಿ ರಸ್ತೆ ಮೂಲಕ ಸಂಶಯಾಸ್ಪದ ರೀತಿಯಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಬೈಲಹೊಂಗಲ ಪೊಲೀಸರು, ತಾಲೂಕಿನ ಗದ್ದಕರವಿನಕೊಪ್ಪ ಕ್ರಾಸ್ ಬಳಿ ಲಾರಿ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ 5 ಲಕ್ಷ ರೂ. ಮೌಲ್ಯದ 500 ಅಕ್ಕಿ ಚೀಲ ಹಾಗೂ ಹಳೇ ಹುಬ್ಬಳ್ಳಿ ಬಂಕಾಪೂರ ಚೌಕ್ ಗೋದಾಮಿನಲ್ಲಿದ್ದ 2.39 ಲಕ್ಷ ರೂ. ಮೌಲ್ಯದ 239 ಪಡಿತರ ಅಕ್ಕಿ ಚೀಲಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಕಾರ್ಯಾಚರಣೆಯಲ್ಲಿ ಬೈಲಹೊಂಗಲ ಸಿಪಿಐ ಉಳವಪ್ಪ ಸಾತೇನಹಳ್ಳಿ, ಪಿಎಸ್ಐ ಈರಪ್ಪ ರಿತ್ತಿ, ಆಹಾರ ನಿರೀಕ್ಷಕ ವಿರಭದ್ರ ಸೇಬನ್ನವರ ಮತ್ತು ಸಿಬ್ಬಂದಿ ಡಿ.ವೈ.ನಾಯ್ಕರ್, ಯು.ಹೆಚ್.ಪೂಜೇರ್, ಎಲ್.ಬಿ.ಹಮಾಣಿ, ಎಸ್.ವೈ.ವರಣ್ಣವರ ಇದ್ದರು. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.