ಅಥಣಿ: ತಾಲೂಕಿನಲ್ಲಿ ಎರಡು ದಿನದಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಕೃಷ್ಣಾ ನದಿಗೆ ಮಹಾರಾಷ್ಟ್ರದ ಜಲಾಶಯದಿಂದ 2.35 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದ್ದು, ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಇದರಿಂದ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ತಾಲೂಕಿನಲ್ಲಿ ನದಿ ತೀರದ 17 ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಮೊದಲು ಜನವಾಡ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಲಿದ್ದು, ತಾಲೂಕು ಆಡಳಿತ ಆ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಬೋಟ್ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಸದ್ಯದ ಮಟ್ಟಿಗೆ ಯಾವುದೇ ಅಪಾಯವಿಲ್ಲ, ಪ್ರವಾಹ ಎದುರಿಸಲು ತಾಲೂಕು ಹಾಗೂ ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಹಿಪ್ಪರಗಿ ಬ್ಯಾರೇಜ್ನಿಂದ ಕೆಳಭಾಗದ ಆಲಮಟ್ಟಿ ಅಣೆಕಟ್ಟೆಗೂ ನೀರು ಹರಿಬಿಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವ ನೀರಿನ ಪ್ರಮಾಣ 3 ಲಕ್ಷ ಕ್ಯೂಸೆಕ್ಗಿಂತ ಅಧಿಕವಾದರೇ ನದಿ ತೀರ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹಿಪ್ಪರಗಿ ನೀರಾವರಿ ಅಭಿಯಂತರ ವಿಠಲ್ ನಾಯಕ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.