ಬೆಂಗಳೂರು/ಬೆಳಗಾವಿ: ಕಾಡಾನೆಗಳ ದಾಳಿಯಿಂದ ಮೃತಪಟ್ಟವರಿಗೆ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದರು. ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಹೆಚ್ಕೆ ಕುಮಾರಸ್ವಾಮಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಾಡಾನೆ ದಾಳಿಯಿಂದ ಮೃತಪಡುವವರಿಗೆ ಪರಿಹಾರವನ್ನು 7.5 ಲಕ್ಷ ದಿಂದ 15 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಈ ಆದೇಶವನ್ನು ಡಿಸೆಂಬರ್ 15 ರಂದೇ ಮಾಡಲಾಗಿದೆ ಎಂದು ಆದೇಶದ ಪ್ರತಿ ತೋರಿಸಿದರು. ಕಾಡಾನೆ ಹಾವಳಿ ತಡೆಗಟ್ಟಲು ರಚಿಸಲಾಗಿರುವ ಟಾಸ್ಕ್ ಫೋರ್ಸ್ಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಹೆಚ್ ಕೆ ಕುಮಾರಸ್ವಾಮಿ, ಮಲೆನಾಡಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ನನ್ನ ಕ್ಷೇತ್ರದಲ್ಲಿ ಆನೆಗಳು ರಸ್ತೆಗಳಲ್ಲೇ ಓಡಾಡುತ್ತಿವೆ. ಹಲವು ಜನರು ಆನೆ ದಾಳಿಯಿಂದ ಬಲಿಯಾಗಿದ್ದಾರೆ. ಆನೆ ಹಾವಳಿ ತಡೆಗೆ ಟಾಸ್ಕ್ ಫೋರ್ಸ್ ಮಾಡುತ್ತೇವೆ ಎಂದು ಸಿಎಂ ಹೇಳಿದ್ದು, ಅದಕ್ಕೆ 47 ಸಿಬ್ಬಂದಿ ನೇಮಿಸಿದ್ದಾರೆ ಎಂದರು.
ಈ ಸಿಬ್ಬಂದಿ ಸ್ವತಂತ್ರ ಹುದ್ದೆಯಲ್ಲಿಲ್ಲ. ಕೆಲಸ ಮಾಡುವವರನ್ನೇ ಇನ್ ಚಾರ್ಜ್ ಆಗಿ ಮಾಡಿದ್ದಾರೆ. ಯಾರೂ ಕೂಡ ಜವಾಬ್ದಾರಿ ತೆಗೆದುಕೊಂಡಿಲ್ಲ. ತಕ್ಷಣ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಬೇಕು ಹಾಗೂ ಕಾಡಾನೆ ಹಾವಳಿಯಿಂದ ಮೃತಪಟ್ಟವರಿಗೆ ಮತ್ತು ಬೆಳೆ ನಷ್ಟವಾದವರಿಗೆ ದ್ವಿಗುಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಸಭಾಪತಿ, ಉಪ ಸಭಾಪತಿ ಆಯ್ಕೆಗೆ ಜಾತಿ ಬಣ್ಣ: ಬೋಜೇಗೌಡರ ಹೇಳಿಕೆಯಿಂದ ಸದನದಲ್ಲಿ ಗದ್ದಲ