ಬೆಳಗಾವಿ: ಹಿಜಾಬ್ ಸಂಬಂಧ ಹೈಕೋರ್ಟ್ ಅಂತಿಮ ತೀರ್ಪನ್ನು ಪ್ರಕಟಿಸಿದ ನಂತರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಇರುವುದರಿಂದ ಮತ್ತು ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿರುವುದರಿಂದ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಮಂಗಳವಾರ (ಮಾರ್ಚ್ 15)ದಿಂದ ಜಿಲ್ಲೆಯಾದ್ಯಂತ ಸಿಆರ್ಪಿಸಿ 1973 ಕಲಂ 144 ರಡಿ ನಿಷೇಧಾಜ್ಞೆ ಆದೇಶವನ್ನು ಹೊರಡಿಸಲಾಗಿತ್ತು. ಈ ಆದೇಶ ಇಂದು ಮಧ್ಯರಾತ್ರಿ 12 ಗಂಟೆವರೆಗೆ ಜಾರಿಯಲ್ಲಿರಲಿದ್ದು, ಆ ನಂತರ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಖಾದಿ ಉತ್ತೇಜನಕ್ಕೆ ಬೆಲೆ ಕೊಡದ ಕೇಂದ್ರ ಸರ್ಕಾರ: ಕೆ.ವಿ.ಪತ್ತಾರ ಆತಂಕ
ಈ ವಿಷಯವಾಗಿ ಮುಂದಿನ ಸೂಕ್ತ ಕ್ರಮವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ನಿಷೇಧಾಜ್ಞೆ ಆದೇಶ ವಾಪಸ್ ಪಡೆದ ಕಾರಣ ಎರಡು ವರ್ಷಗಳಿಂದ ಮಂಕಾಗಿದ್ದ ಹೋಳಿ ಹಬ್ಬ ನಾಳೆ ರಂಗು ಪಡೆಯಲಿದೆ. ನಗರದ ಹಲವೆಡೆ ಬಣ್ಣದಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.