ಬೆಳಗಾವಿ : ಜಿಲ್ಲೆಯ ಖಾನಾಪುರ ಹೊರವಲಯದಲ್ಲಿ ಸೆ.28ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣದ ಹಂತಕರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅನ್ಯ ಸಮುದಾಯದ ಯುವತಿಯನ್ನು ಪ್ರೀತಿಸಿದ್ದೇ ಯುವಕನ ಕೊಲೆಗೆ ಮುಖ್ಯ ಕಾರಣ ಎಂಬುದು ತನಿಖೆ ವೇಳೆ ದೃಢಪಟ್ಟಿದೆ.
ಯುವತಿ ತಂದೆ ಈರಪ್ಪ ಕಂಬಾರ, ತಾಯಿ ಸುಶೀಲಾ ಕಂಬಾರ, ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ್, ಕುತಬುದ್ದೀನ್ ಬೇಪಾರಿ, ಪ್ರಲ್ಹಾದ್ ಸುಗತೆ, ಮಂಜುನಾಥ ಗೋಂದಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 ಆರೋಪಿಗಳನ್ನ ಬಂಧಿಸಲಾಗಿದೆ. ವಾಹನಗಳ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಅರ್ಬಾಜ್ ಮುಲ್ಲಾನನ್ನು ಸೆಪ್ಟೆಂಬರ್ 28ರಂದು ಬರ್ಬರವಾಗಿ ಹತ್ಯೆಗೈದು ರೈಲ್ವೆ ಹಳಿ ಮೇಲೆ ಬಿಸಾಕಿ ಹೋಗಲಾಗಿತ್ತು.
4 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ : ಈರಪ್ಪ-ಸುಶೀಲಾ ದಂಪತಿಯ ಹಿರಿಯ ಪುತ್ರಿ ಹಾಗೂ ಅರ್ಬಾಜ್ ಕಳೆದ 4 ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಲವು ಸಲ ರಾಜಿ ಪಂಚಾಯತ್ ಮಾಡಿ ಇಬ್ಬರನ್ನೂ ಬೇರ್ಪಡಿಸುವ ಯತ್ನ ಫಲ ನೀಡಲಿಲ್ಲ. ಹೀಗಾಗಿ, ಯುವಕನನ್ನು ಕೊಲೆಗೈಯ್ಯುವ ನಿರ್ಧಾರಕ್ಕೆ ಬಂದ ಕುಟುಂಬಸ್ಥರಿಗೆ ಹಲವರು ಸಾಥ್ ನೀಡಿದ್ದಾರೆ.
ಐವರು ಸೇರಿ ಯುವಕನನ್ನು ಸೆ.28ರಂದು ಹತ್ಯೆಗೈದಿದ್ದಾರೆ. ಯುವಕ ರೈಲು ಅಪಘಾತದಲ್ಲಿ ಮೃತ ಪಟ್ಟಿದ್ದಾನೆ ಎಂದು ತೋರಿಸಲು ಹತ್ಯೆಗೆ ಹಂತಕರು ರೈಲ್ವೆ ಹಳಿಯನ್ನೇ ಬಳಸಿದ್ದಾರೆ. ಕೃತ್ಯ ಮುಚ್ಚಿ ಹಾಕಬೇಕು ಎಂಬುದೇ ಹಂತಕರ ಮುಖ್ಯ ಉದ್ದೇಶವಾಗಿತ್ತು.
ಪ್ರಕರಣ ಬೇಧಿಸುವಲ್ಲಿ ಯಶಸ್ವಿ : ಸೆ. 28ರಂದು ಅರ್ಬಾಜ್ ನಿಗೂಢ ಸಾವು ಪ್ರಕರಣ ಸಂಬಂಧ ಆತ ತಾಯಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ರೈಲ್ವೆ ಪೊಲೀಸ್ ಠಾಣೆಯಿಂದ ಈ ಪ್ರಕರಣ ಖಾನಾಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಜಿಲ್ಲಾ ಪೊಲೀಸರಿಗೆ ಪ್ರಕರಣ ವರ್ಗಾವಣೆಗೊಳ್ಳುತ್ತಿದ್ದಂತೆ ತೀವ್ರತೆ ಪಡೆದ ತನಿಖೆ ಕ್ಲಿಷ್ಟಕರ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.