ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಭಾವಿ ಸಿಎಂ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವದ ಕಿಚ್ಚು ಹಚ್ಚಿದ್ದ ಶಾಸಕ ಜಮೀರ್ ಅಹಮ್ಮದ್ ಇದೀಗ ತಣ್ಣಗಾಗಿದ್ದಾರೆ. ಸಿದ್ದರಾಮಯ್ಯನವ್ರ ನಿವಾಸದ ಬಳಿ ಮಾತನಾಡಿದ ಜಮೀರ್ ಅಹಮ್ಮದ್ ಅವರು, ಜನರ ಅಭಿಪ್ರಾಯ ಮುಖ್ಯ, ಅದರ ಮೇಲೆ ಸಿಎಂ ಆಗ್ತಾರೆ. ಈ ಬಗ್ಗೆ ಮಾತನಾಡಬೇಡಿ ಎಂದು ನಮಗೆ ನಮ್ಮ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ, ನಾನು ನಾಯಕತ್ವದ ವಿಚಾರದ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.
ಸಿಎಂ ಸ್ಥಾನದ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ. ಲಿಂಗಾಯತರಲ್ಲಿ ನಮಗೆ ಕೊಡಿ ಅಂತ ಎಂ ಬಿ ಪಾಟೀಲ್ ಹೇಳ್ತಾರೆ. ಅಲ್ಪಸಂಖ್ಯಾತರಲ್ಲಿ ನನಗೆ ಅವಕಾಶ ಕೊಡಿ ಅಂತ ಸಿ ಎಂ ಇಬ್ರಾಹಿಂ ಹೇಳ್ತಾರೆ. ತನ್ವೀರ್ ಸೇಠ್ ನಾನು ಮುಖ್ಯಮಂತ್ರಿ ಅಂದಿದ್ದಾರೆ. ಈ ಬಗ್ಗೆ ನಮ್ಮ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ನೀಡಬೇಕೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ಜನ, ನಮ್ಮ ಹೈಕಮಾಂಡ್ ತೀರ್ಮಾನಿಸಬೇಕು. ನಾನು ಸಿಎಂ ಅಭ್ಯರ್ಥಿ ಅಲ್ಲ. ಆ ಮಟ್ಟಕ್ಕೆ ನಾನಿನ್ನೂ ಹೋಗಿಲ್ಲ. ನನ್ನನ್ನ ಎಲ್ಕೆಜಿಯವರು ಅಂತ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಎಲ್ಕೆಜಿಯಾಗಿರುವವನಿಗೆ ಆ ಸ್ಥಾನ ಸಿಗುತ್ತಾ? ಈಗ ತನ್ವೀರ್ ಸೇಠ್, ನಾನೂ ಸಿಎಂ ಅಂತಿದ್ದಾರೆ. ಸಿ ಎಂ ಇಬ್ರಾಹಿಂ ನಾನು ಸಿಎಂ ಆಕಾಂಕ್ಷಿ ಅಂತಿದ್ದಾರೆ. ನನ್ನನ್ನು ಸೆಕೆಂಡರಿ ಸ್ಕೂಲ್ಗೆ ಹೋಲಿಸಿದ್ದಾರೆ. ಹಾಗಾಗಿ, ನಾನೆಲ್ಲಿ ಆ ಸ್ಥಾನಕ್ಕೆ ಹೋಗೋಕೆ ಸಾಧ್ಯ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ಬಾಲಕಿ ಮೇಲೆ ನಿರಂತರ ಅತ್ಯಾಚಾರ ಆರೋಪ : 7 ಜನರ ವಿರುದ್ದ ದೂರು ದಾಖಲು