ಬೆಂಗಳೂರು : ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರನ್ನು ಸೆಳೆಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ “ಯುವ ಮತ” ಅಭಿಯಾನ ಶುರು ಮಾಡಿದೆ. 18 ರಿಂದ 23 ವರ್ಷ ವಯಸ್ಸಿನ, ಯುವ ಮತದಾರಿಗೆ ನಿಮ್ಮ ಮೊದಲ ಮತವನ್ನು ಸಂಭ್ರಮಿಸಿ ಅಭಿಯಾನ ಆರಂಭಿಸಲಾಗಿದೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಶೇಖ್ ದತ್ತ್ ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರನ್ನು ಸೆಳೆಯಲು ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರು “ಯುವ ಮತ” ಜಾಲತಾಣವನ್ನು ಲೋಕಾರ್ಪಣೆ ಮಾಡಿದರು. ಈ ಮೂಲಕ ರಾಜ್ಯಾದ್ಯಂತ ಯುವ ಮತದಾರರಿಗೆ ಧ್ವನಿಯಾಗಲು ಯುವ ಕಾಂಗ್ರೆಸ್ನಿಂದ ಎಲ್ಲಾ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳು, ಸಾಮಾಜಿಕ, ಸಾಂಸ್ಕೃತಿ ಕಾರ್ಯಕ್ರಮಗಳು, ಮತ್ತಿತರ ಭಾಗಗಳಲ್ಲಿ ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದೆ.
ಕಾಂಗ್ರೆಸ್ ಪಕ್ಷದ ಪ್ರಮುಖ ಗ್ಯಾರೆಂಟಿ ಯೋಜನೆ : ಈ ಸಂದರ್ಭದಲ್ಲಿ ಅಭಿಶೇಖ್ ದತ್ತ್ ಮಾತನಾಡಿ, ಯುವ ಸಮೂಹಕ್ಕೆ ಕಾಂಗ್ರೆಸ್ ಹೆಚ್ಚಿನ ಒತ್ತು ನೀಡಿದ್ದು, ಇದಕ್ಕಾಗಿ ಯುವ ನಿಧಿ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದ್ದು, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ ಹಾಗೂ ಡಿಪ್ಲೊಮೋ ಪಡೆದವರಿಗೆ 1,500 ರೂ ನೀಡುತ್ತಿದೆ. ಈ ಕಾರ್ಯಕ್ರಮದ ನೋಂದಣಿಯನ್ನು ಸಹ “ಯುವ ಮತ” ಅಭಿಯಾನದ ಸಂದರ್ಭದಲ್ಲಿ ಮಾಡಲಾಗುವುದು. ಇದು ಕಾಂಗ್ರೆಸ್ ಪಕ್ಷದ ಪ್ರಮುಖ ಗ್ಯಾರೆಂಟಿ ಯೋಜನೆಯಾಗಿದ್ದು, ಶಿಕ್ಷಣ ಪಡೆದು ಉದ್ಯೋಗವಿಲ್ಲದವರ ತಂದೆ, ತಾಯಿ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಹೀಗಾಗಿ ಅವರು ಯಾರ ಮೇಲೂ ಅವಲಂಬಿತರಾಗದೇ ಸ್ವಾವಲಂಬಿ ಬದುಕು ಸಾಗಿಸಲು ನೆರವು ನೀಡಲಾಗುವುದು. ಜೊತೆಗೆ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರನ್ನು ಪತ್ತೆ ಮಾಡಿ ತಮ್ಮ ಅಮೂಲ್ಯ ಮತವನ್ನು ಸಮರ್ಥವಾಗಿ ಬಳಸುವಂತೆ ಅರಿವು ಮೂಡಿಸಲಾಗುವುದು ಎಂದರು.
ಬಳಿಕ ಇದೇ ವೇಳೆ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ಯುವ ಮತದಾರರನ್ನು ಸೆಳೆಯಲು ರಾಜ್ಯಾದ್ಯಂತ ವಿಶೇಷ ಅಭಿಯಾನವನ್ನು ಇಂದಿನಿಂದ ಆರಂಭಿಸಿದ್ದು, 18 ರಿಂದ 23 ವಯೋಮಿತಿಯ ಯುವ ಜನಾಂಗದ ಆಕಾಂಕ್ಷೆ, ನಿರೀಕ್ಷೆಗಳನ್ನು ಸಾಕಾರಗೊಳಿಸಲು ಯುವ ಮತ ಅಭಿಯಾನ ಯುವ ಸಮೂಹಕ್ಕೆ ವೇದಿಕೆಯೂ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಇತರೆ ಸಮಾನ ಮನಸ್ಕ ಜನ ಸಮೂಹವನ್ನು ಸಹ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗುವುದು. ಯುವ ಜನರಿಗೆ ಉದ್ಯೋಗ, ಅವರ ಸಾಮಾಜಿಕ ಕಳಕಳಿ, ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ ಸೇರಿದಂತೆ ಎಲ್ಲಾ ಅಭಿಪ್ರಾಯಗಳನ್ನು ರಾಜ್ಯದ ಉದ್ದಗಲಕ್ಕೂ ಸಂಗ್ರಹಿಸಲಾಗುವುದು ಎಮದು ಹೇಳಿದರು.
ಜೊತೆಗೆ ಯೂತ್ ಜೋಡೋ – ಬೂತ್ ಜೋಡೋ ಕಾರ್ಯಕ್ರಮವನ್ನು ಸಹ ಜಾರಿಗೊಳಿಸಲಾಗುವುದು. ಎಲ್ಲಾ ಶಿಕ್ಷಣ ಸಂಸ್ಥೆಗಳು, ಕಾರ್ಯಾಗಾರಗಳು, ಪಕ್ಷದ ರಾಷ್ಟ್ರೀಯ ನಾಯಕರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅಭಿಯಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಮಾಜದ ವಿವಿಧ ವರ್ಗಗಳು, ಚಲನಚಿತ್ರೋದ್ಯಮ, ಕಲೆ, ಸಂಗೀತ ವಲಯದ ಪ್ರಮುಖರನ್ನು ಒಳಗೊಂಡು ಯುವಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಮುಂದೆ ಕಾಂಗ್ರೆಸ್ ಸರ್ಕಾರದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇವೆ ಎಂದು ರಕ್ಷಾ ರಾಮಯ್ಯ ಹೇಳಿದರು.
ಯುವ ಮತದಾರರಲ್ಲಿ ಉತ್ಸಾಹ, ಹುರುಪು ತುಂಬಲು ಅಭಿಯಾನ : ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಉದ್ಯೋಗ ಅತ್ಯಂತ ಮಹತ್ವದ್ದಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಖಾಸಗಿ ವಲಯದಿಂದ 10 ರಿಂದ 15 ಲಕ್ಷ ಯುವ ಸಮೂಹಕ್ಕೆ ಉದ್ಯೋಗಾವಕಾಶಗಳನ್ನು ಸೃಜಿಸಲಾಗುವುದು. ಯುವ ಜನರಲ್ಲಿ ಮತದಾನದ ಬಗ್ಗೆ ನಿರಾಸಕ್ತಿ ಕಂಡು ಬಂದಿದ್ದು, ಅವರಲ್ಲಿ ಉತ್ಸಾಹ ಮತ್ತು ಹುರುಪು ತುಂಬಲು ಅಭಿಯಾನದ ಮೂಲಕ ಪ್ರಯತ್ನಿಸಲಾಗುವುದು ಎಂದು ರಕ್ಷಾ ರಾಮಯ್ಯ ತಿಳಿಸಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಕ್ಷಾ ರಾಮಯ್ಯ, ಪಕ್ಷ ಇದೀಗ ನೀಡುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತೇನೆ. ಬರುವ ದಿನಗಳಲ್ಲಿ ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಕೋವಿಡ್ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಯುವ ಕಾಂಗ್ರೆಸ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಈ ಬಾರಿಯ ಚುನಾವಣೆಯಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದೆ ಎಂದರು.
ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ ನಾಯಕರ ಮನೆ ಮುಂದೆ ಮುಖಂಡರು ಕಾರ್ಯಕರ್ತರ ಹೈಡ್ರಾಮ: ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ