ಬೆಂಗಳೂರು : ದೀಪಾವಳಿ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಪಟಾಕಿಯದ್ದೇ ಸದ್ದು. ಆದರೆ, ಹಬ್ಬದ ಸಂಭ್ರಮದ ನೆಪದಲ್ಲಿ ಪಟಾಕಿ ಹಚ್ಚಿ ರಸ್ತೆಯಲ್ಲಿ ಓಡಾಡುವವರ ಮೇಲೆಸೆದು ಪುಂಡಾಟ ಆಡಿದ ಯುವಕರ ಗುಂಪೊಂದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ತಡರಾತ್ರಿ ಜ್ಞಾನಭಾರತಿ ವ್ಯಾಪ್ತಿಯ ಮಾರುತಿ ನಗರದಲ್ಲಿ ನಡೆದಿದೆ.
ಮಹಾದೇವಸ್ವಾಮಿ ಎಂಬುವರ ಮೇಲೆ ಅದೇ ಏರಿಯಾದ ಸ್ಥಳೀಯ ಯುವಕರ ಗುಂಪು ಹಲ್ಲೆ ಮಾಡಿದ್ದು, ಪರಿಣಾಮ ಮಹಾದೇವಸ್ವಾಮಿ ಅವರ ಕುತ್ತಿಗೆ ಮೂಳೆ ಮುರಿದಿದೆ.
ಇದನ್ನೂ ಓದಿ: ಶಿವಮೊಗ್ಗ: ಮುಸುಕು ಧರಿಸಿ ಬಂದು ಯುವಕನ ಮೇಲೆ ದಾಳಿ
ದೀಪಾವಳಿ ಸಂಭ್ರಮದ ನೆಪದಲ್ಲಿ ಬೆಳಗ್ಗೆಯಿಂದಲೂ ಏರಿಯಾದಲ್ಲಿ ಪಟಾಕಿ ಸಿಡಿಸುತ್ತಿದ್ದ 7-8 ಯುವಕರ ಗುಂಪು ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧರ ಮೇಲೆ ಪಟಾಕಿ ಎಸೆದು ಪುಂಡಾಟವಾಡುತ್ತಿದ್ದರು. ಅದೇ ರೀತಿ ತಡರಾತ್ರಿ 9:30ರ ಸುಮಾರಿಗೆ ರಸ್ತೆಯಲ್ಲಿ ತೆರಳುತ್ತಿದ್ದ ಮಹಾದೇವಸ್ವಾಮಿ ಮೇಲೆ ಸಹ ಯುವಕರು ಪಟಾಕಿ ಎಸೆದಿದ್ದಾರೆ.
ಈ ವೇಳೆ 'ಯಾಕಪ್ಪ ಹೀಗೆ ಮಾಡ್ತಿದ್ದೀರಿ?' ಅಂತಾ ಮಹಾದೇವಸ್ವಾಮಿ ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ರೊಚ್ಚಿಗೆದ್ದ ಯುವಕರ ಗುಂಪು ಸ್ಥಳದಲ್ಲಿ ಅಂಗಡಿಯ ಮುಂದಿದ್ದ ಪ್ಲಾಸ್ಟಿಕ್ ಟ್ರೇನಿಂದ ಮಹಾದೇವಸ್ವಾಮಿ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಯುವಕನ ಮೇಲೆ ದುಷ್ಕರ್ಮಿಗಳಿಂದ ಮನಬಂದಂತೆ ಹಲ್ಲೆ: ವೈರಲ್ ವಿಡಿಯೋ
ಇನ್ನು ಹಲ್ಲೆಗೊಳಗಾದ ಮಹಾದೇವಸ್ವಾಮಿ, ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದು ಸದ್ಯ ಅಪ್ರಾಪ್ತರ ಸಹಿತ ಮೂವರ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.