ಬೆಂಗಳೂರು : ಹಣಕಾಸಿನ ವಿಚಾರಕ್ಕಾಗಿ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ದರ್ಶನ್ ಎಂಬಾತ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಕಿರಣ್, ಪವನ್, ಕಾರ್ತಿಕ್, ಮಣಿಕಂಠ, ಪವನ್‌ಕುಮಾರ್, ಅಭಿಷೇಕ್, ಅನಿಲ್‌ಕುಮಾರ್, ಮುನೇಶ್‌ಕುಮಾರ್, ಶಶಾಂಕ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆೊಪ್ಪಿಸಲಾಗಿದೆ.

ಮೆಹಬೂಬ್(19) ಎಂಬಾತ ಕೊಲೆಯಾಗಿದ್ದ ಯುವಕ. ಆರೋಪಿ ಮಣಿ ಹಾಗೂ ಎದುರಾಳಿ ಗುಂಪಿನವನಾಗಿದ್ದ ಲಲಿತ್ ನಡುವೆ ಗೇಮ್ ಬೆಟ್ಟಿಂಗ್ ವಿಚಾರದಲ್ಲಿ ಮನಸ್ತಾಪವಿತ್ತು. ಹಣ ಕೇಳಲು ಮಣಿ ಎಂಬಾತ ಬಂದಾಗ ಆತನ ಮೇಲೆ ಲಲಿತ್ನ ಬಣ ಹಲ್ಲೆ ನಡೆಸಿತ್ತು.
ಇದೇ ಜಿದ್ದಿನಿಂದ ಮಣಿ ಹಾಗೂ ಆತನ ಗ್ಯಾಂಗ್ ಇದೇ ತಿಂಗಳ 4ರಂದು ಲಲಿತ್ ಗ್ಯಾಂಗ್ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ನಡೆಸಿತ್ತು. ಗಲಾಟೆ ವೇಳೆ ಮೆಹಬೂಬ್, ಮಂಜುನಾಥ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೆ, ಲಲಿತ್ ಹಾಗೂ ದರ್ಶನ್ ಎಂಬುವರು ತಪ್ಪಿಸಿಕೊಂಡಿದ್ದರು.
ಇದನ್ನೂ ಓದಿ: ಯುವತಿ ವಿಚಾರವಾಗಿ ಗಲಾಟೆ: ಕಲಬುರಗಿಯಲ್ಲಿ ಯುವಕನ ಬರ್ಬರ ಹತ್ಯೆ
ಗಂಭೀರವಾಗಿ ಗಾಯಗೊಂಡಿದ್ದ ಮೆಹಬೂಬ್ನನ್ನು ಆಸ್ಪತ್ರೆಗೆ ಸೇರಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು 9 ಮಂದಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.