ಬೆಂಗಳೂರು: ಭಾರತದ ಶಕ್ತಿ ಎಂದರೆ ಯುವ ಸಮೂಹ. ಇಡೀ ವಿಶ್ವದ ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಶ್ರೀಮಂತವಾಗಿರುವುದೇ "ಯುವ" ಸಮುದಾಯದಿಂದ. ಇವರಿಗೆ ನಮ್ಮ ಪ್ರಜಾಪ್ರಭುತ್ವದ ಆಶಯಗಳನ್ನು ಕೊಂಡೊಯ್ಯಬೇಕಾದ ಜವಾಬ್ದಾರಿ ಇದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ಡಾ. ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿ ನಡೆದ ಯುವ ಮತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಾರಿಯ ಕರ್ನಾಟಕ ಚುನಾವಣೆ ಅತ್ಯಂತ ಪ್ರಮುಖವಾಗಿರುತ್ತದೆ. ಏಕೆಂದರೆ ಯುವ ಸಮೂಹದ ಪಾತ್ರ ಇದರಲ್ಲಿ ಮುಖ್ಯವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಯುವ ಮತ ಅಭಿಯಾನ ಆರಂಭಿಸಿದೆ. ಕಳೆದ ಮಾರ್ಚ್ ಅಂತ್ಯದಿಂದ ಆರಂಭವಾದ ಅಭಿಯಾನಕ್ಕೆ 18 ಸಾವಿರಕ್ಕೂ ಹೆಚ್ಚು ಯುವಕರು ಕೈ ಜೋಡಿಸಿದ್ದಾರೆ ಎಂದರು.

ಹಕ್ಕು ಚಲಾಯಿಸುವುದನ್ನು ಮರೆಯಬಾರದು- ಡಾ. ಶಶಿ ತರೂರ್: ಯುವ ಮತದಾರರು ಅದರಲ್ಲಿಯೂ ಮೊದಲ ಬಾರಿಗೆ ಮತ ಚಲಾಯಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವರೆಲ್ಲರೂ ಭವಿಷ್ಯದ ಕುಡಿಗಳು. ಯುವ ಸಮುದಾಯ ಜವಾಬ್ದಾರಿಯುತವಾಗಿ ತಮ್ಮ ಮತ ಚಲಾಯಿಸಬೇಕು. ಯಾರೊಬ್ಬರೂ ಈ ಹಕ್ಕು ಚಲಾಯಿಸುವುದನ್ನು ಮರೆಯಬಾರದು ಎಂದು ಡಾ. ಶಶಿ ತರೂರ್ ಕರೆ ನೀಡಿದರು. ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಯುವ ಮತ ಅಭಿಯಾನವನ್ನು ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಡೆಸುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಯಶಸ್ವಿಯಾಗಲಿ. ಯುವ ಮತದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿ.
ಯುವ ಸಮೂಹದ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ ಎನ್ನುವುದಕ್ಕೆ ಈಗ ಇಲ್ಲಿ ಜಾರಿಗೆ ತರುತ್ತಿರುವ ಯುವನಿಧಿ ಗ್ಯಾರಂಟಿ ಯೋಜನೆಯೇ ಸಾಕ್ಷಿ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1500 ರೂಪಾಯಿಯನ್ನು ಎರಡು ವರ್ಷಗಳ ಕಾಲ ನೀಡಲಾಗುವುದು. ಇದರಿಂದ ಉದ್ಯೋಗ ಅರಸುವವರಿಗೆ ಆಸರೆಯಾಗುತ್ತದೆ ಎಂದು ವಿವರಿಸಿದರು.

ವಿಶ್ವಬ್ಯಾಂಕ್ ಕೂಡ ಭಾರತವನ್ನು ಅತ್ಯಂತ ಯುವ ದೇಶ ಎಂದು ಮನ್ನಣೆ ನೀಡಿದೆ. ಭಾರತದಲ್ಲಿ ಯುವ ಶಕ್ತಿಯ ಸಾಮರ್ಥ್ಯ ಮುಂದಿನ 20 ವರ್ಷಗಳವರೆಗೆ ಇರುತ್ತದೆ ಎಂದರು. ಅನ್‌ಪ್ಲಗ್ಡ್ ಡಾ. ಶಶಿ ತರೂರು ಕಾರ್ಯಕ್ರಮದಲ್ಲಿ ಆಂದೋಲನದ ಉಸ್ತುವಾರಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮಾತನಾಡಿ, "ಯುವಮತʼʼ ವು ಹೊಸ ಮತದಾರರು ಮತ್ತು ಯುವಜನರ ಮತದಾನವು ದೇಶದ ರಾಜಕೀಯ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗೆ ಕಾರಣವಾಗುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ವಿವರಿಸಿದರು.
ಈ ವಿಶೇಷ ಸಂವಾದದಲ್ಲಿ ಶಾಸಕ ಕೃಷ್ಣ ಭೈರೇಗೌಡ, ಯುವ ಮುಖಂಡರಾದ ಅಭಿಷೇಕ್ ದತ್, ಯುವ ಸಮುದಾಯ,ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂವಾದಕ್ಕೆ ಕರ್ನಾಟಕದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಡಾ. ಶಶಿ ತರೂರ್ ಉತ್ತರಿಸಿದರು.
ಇದನ್ನೂ ಓದಿ: ದೇಶದಲ್ಲಿ ಆರ್ಎಸ್ಎಸ್ ಇರದಿದ್ದರೆ ಹಿಂದುಗಳೇ ಉಳಿಯುತ್ತಿರಲಿಲ್ಲ: ಕೆ.ಎಸ್.ಈಶ್ವರಪ್ಪ