ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರ ಹಿಡಿದು ಬಡಿದಾಡಿಕೊಂಡ ಎರಡು ಯುವಕರ ಗುಂಪುಗಳ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ರಾತ್ರಿ ಮಾಗಡಿ ರಸ್ತೆಯ ರಹೇಜಾ ಅಪಾರ್ಟ್‌ಮೆಂಟ್ ಸಮೀಪದ ರಾಯಲ್ ಬಾರ್ ಸಮೀಪದಲ್ಲಿ ಗುರಾಯಿಸಿದರು ಎಂಬ ಕಾರಣಕ್ಕೆ ಕಬ್ಬಿಣದ ರಾಡ್, ಚಾಕು ಹಿಡಿದು ಯುವಕರು ಪರಸ್ಪರ ಬಡಿದಾಡಿಕೊಂಡಿದೆ.
ಪರಿಣಾಮ ಪ್ರಜ್ವಲ್ ಎಂಬಾತನ ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ರೆ ಪ್ರಶಾಂತ್, ಪ್ರವೀಣ್ ಹಾಗೂ ಚಂದ್ರು ಎಂಬ ಯುವಕರು ಪೊಲೀಸರ ಅತಿಥಿಗಳಾಗಿದ್ದಾರೆ.
ದೊಡ್ಡಬಳ್ಳಾಪುರ, ಮಾಗಡಿ ರೋಡ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಜ್ವಲ್ ಗುರುವಾರ ರಾತ್ರಿ 8:30ರ ಸುಮಾರಿಗೆ ಅಗ್ರಹಾರ ದಾಸರಹಳ್ಳಿ ಬಳಿ ಎದುರಾಳಿ ಪ್ರವೀಣನನ್ನ ನೋಡಿದ್ದಾನೆ. ಹೇಳಿ ಕೇಳಿ ಪ್ರವೀಣ ಅಗ್ರಹಾರ ದಾಸರಹಳ್ಳಿಯಲ್ಲಿ ರೌಡಿಸಂ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದವನು.
ಆದ್ದರಿಂದ ಪ್ರವೀಣನನ್ನ ಹೊಡಿಬೇಕು, ತನಗೆ ಇನ್ನೊಂದಷ್ಟು ಹವಾ ಕ್ರಿಯೇಟ್ ಆಗತ್ತೆ ಅಂತಾ ಜೊತೆಗಿದ್ದ ಪ್ರಶಾಂತ್, ಕಿರಣನನ್ನ ಪ್ರಚೋದಿಸಿದ್ದ. ಬಳಿಕ ಪ್ರಜ್ವಲ್ ಗುಂಪು ಏಕಾಏಕಿ ಪ್ರವೀಣನ ಮೇಲೆ ಅಟ್ಯಾಕ್ ಮಾಡಿದೆ. ಇದೇ ಸಂದರ್ಭದಲ್ಲಿ ಪ್ರವೀಣನ ಜೊತೆಗಿದ್ದ ಚಂದ್ರು ಹಾಗೂ ಇತರ ಕೆಲ ಸ್ನೇಹಿತರು ಪ್ರಜ್ವಲ್ ಮತ್ತವನ ಹುಡುಗರ ಮೇಲೆ ತಿರುಗಿ ಬಿದ್ದಿದ್ದಾರೆ. ಎರಡೂ ಗುಂಪಿನವರ ಬೀದಿ ಬಡಿದಾಟದಲ್ಲಿ ಪ್ರಜ್ವಲ್ಗೆ ಚಾಕು ಇರಿಯಲಾಗಿದೆ.
ಗೋವಿಂದರಾಜನಗರ ಠಾಣೆಯಲ್ಲಿ ಎರಡೂ ಗುಂಪಿನ ವಿರುದ್ಧ ದೂರು ಪ್ರತಿದೂರು ದಾಖಲಾಗಿದ್ದು ಪ್ರಜ್ವಲ್, ಪ್ರಶಾಂತ್, ಚಂದ್ರು ಹಾಗೂ ಪ್ರವೀಣನನ್ನ ವಶಕ್ಕೆ ಪಡೆಯಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಓದಿ: ಕಬಡ್ಡಿ ಪಂದ್ಯಾವಳಿಯಲ್ಲಿ ಬಿಗ್ ಫೈಟ್.. ಕೈಗೆ ಸಿಕ್ಕ ಕಟ್ಟಿಗೆ ಹಿಡಿದು ಬಡಿದಾಡಿಕೊಂಡ ಯುವಕರು