ಬೆಂಗಳೂರು: ಊಟ ಮುಗಿದಿದೆ ಎಂದ ಕಾರಣಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಯುವಕರ ಗುಂಪೊಂದು ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಯುವಕರ ಗುಂಪಿನಲ್ಲಿ ಪ್ರಭಾವಿ ನಾಯಕರೊಬ್ಬರ ಮಗ ಇದ್ದ ಎಂದು ಹೇಳಲಾಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ರೆಸ್ಟೋರೆಂಟ್ವೊಂದರಲ್ಲಿ ನ.20ರಂದು ಘಟನೆ ನಡೆದಿದೆ. ರಾತ್ರಿ 11.30ರ ಸುಮಾರಿಗೆ 15ರಿಂದ 20 ಜನರ ಗುಂಪು ರೆಸ್ಟೋರೆಂಟ್ಗೆ ಬಂದು ಊಟಕ್ಕೆ ಆರ್ಡರ್ ಮಾಡಿದೆ. ಆದರೆ, ರೆಸ್ಟೋರೆಂಟ್ ಮುಚ್ಚುವ ಸಮಯವಾಗಿದ್ದು, ಊಟ ಸಿದ್ಧಪಡಿಸಲು ಸಾಧ್ಯವಿಲ್ಲ ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೆ ಯವಕರ ಗುಂಪು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಕುಡಿದ ನಶೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಯವಕರ ಗುಂಪು ಹಲ್ಲೆ ಮಾಡಿರುವ ದೃಶ್ಯಗಳನ್ನು ಸ್ಥಳಲ್ಲಿದ್ದ ಗ್ರಾಹಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಹ ವೈರಲ್ ಆಗಿದೆ. ಅಲ್ಲದೇ, ಈ ಘಟನೆ ದಿನವೇ ರೆಸ್ಟೋರೆಂಟ್ನವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದೂ ಗೊತ್ತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಅಲ್ಲದೇ, ಆರೋಪಿಗಳ ಈಗಾಗಲೇ ಗುರುತು ಪತ್ತೆಯಾಗಿದೆ. ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆನೇಕಲ್ ಪೊಲೀಸರ ಭರ್ಜರಿ ಬೇಟೆ.. ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್