ಬೆಂಗಳೂರು : ನಗರದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಅಪಾರ್ಟ್ಮೆಂಟ್ವೊಂದರ 33ನೇ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ನಡೆದಿದೆ. ಕೆ.ಆರ್. ಪುರಂ ಠಾಣೆ ವ್ಯಾಪ್ತಿಯ ಅಯ್ಯಪ್ಪ ನಗರದ ಕೊಡಿಗೇಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ದೀಪಾಂಶು ಶರ್ಮಾ (27) ಎಂದು ಗುರುತಿಸಲಾಗಿದೆ.
ಕೆಆರ್ ಪುರಂ ಪೊಲೀಸರ ಮಾಹಿತಿ : ನಿವೃತ್ತ ವಾಯು ಸೇನಾಧಿಕಾರಿಯ ಮಗನಾಗಿರುವ ದೀಪಾಂಶು ಶರ್ಮಾ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ಪಿಜಿಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ ತನ್ನ ಸ್ನೇಹಿತನ ಅಪಾರ್ಟ್ಮೆಂಟ್ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ದೀಪಾಂಶು ಬೆಳಗ್ಗಿನ ಜಾವ 6.45ರ ಸುಮಾರಿಗೆ ಬಾಲ್ಕನಿ ಬಳಿ ತೆರಳಿದ್ದಾಗ ಆಯತಪ್ಪಿ 33ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಮೃತನ ತಂದೆ ನೀಡಿರುವ ದೂರಿನ ಮೇರೆಗೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಓದಿ: ರಾಜ್ಯದಲ್ಲಿ ಬರದಿಂದ ರೈತರ ಆತ್ಮಹತ್ಯೆಗಳು ಆರಂಭವಾಗಿವೆ: ಕುಮಾರಸ್ವಾಮಿ ಆತಂಕ