ಬೆಂಗಳೂರು: ಉತ್ತರಪ್ರದೇಶದಲ್ಲಿ 19 ವರ್ಷದ ದಲಿತ ಯುವತಿಯನ್ನು ಬರ್ಬರವಾಗಿ ಅತ್ಯಾಚಾರ ಮಾಡಿ ಆಕೆ ಸಾಯುವಂತೆ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಮೊಂಬತ್ತಿ ಬೆಳಗಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಯುವತಿಯ ಹತ್ಯೆಯನ್ನು ಖಂಡಿಸಿದ್ರು. ಘಟನೆಯನ್ನು ಸಮರ್ಥವಾಗಿ ನಿಭಾಯಿಸುವುದು ಹಾಗೂ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಅವುಗಳನ್ನು ತಡೆಯುವಲ್ಲಿ ವಿಫಲವಾಗಿರುವ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಕೇಂದ್ರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆ ಹಾಗೂ ದಲಿತ ಯುವತಿಗೆ ಶೃದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ದಲಿತ ಯುವತಿಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು. ಎರಡು ವಾರದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಕೊನೆಗೂ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟ ಯುವತಿಯ ಅಂತ್ಯಸಂಸ್ಕಾರಕ್ಕೂ ಕುಟುಂಬ ಸದಸ್ಯರಿಗೆ ಅವಕಾಶ ಮಾಡಿ ಕೊಡಲಾಗಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿಲ್ಲ. ಉತ್ತರ ಪ್ರದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ದಲಿತರನ್ನು ಹತ್ತಿಕ್ಕುವ ಕಾರ್ಯ ಆಗುತ್ತಿದೆ. ಕೂಡಲೇ ಯೋಗಿ ಆದಿತ್ಯನಾಥ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಂಗಳಮುಖಿ ಸರೀತಾ, ಭಾರತಿ ಶಂಕರ್, ಯುವ ನಾಯಕಿಯರಾದ ಭವ್ಯ, ಭವ್ಯ ನರಸಿಂಹಮೂರ್ತಿ, ಡಾ. ವನಿತಾ, ಬೆಂಗಳೂರು ನಗರ ಸೆಂಟ್ರಲ್ ವಿಭಾಗದ ಮಹಿಳಾ ಅಧ್ಯಕ್ಷೆ ಸಲ್ಮಾ, ಕವಿತಾ ರೆಡ್ಡಿ, ಲಾವಣ್ಯ, ರಾಷ್ಟ್ರೀಯ ಕಾರ್ಯದರ್ಶಿ ಪುಷ್ಪಾ, ಸುಮಾ, ದೀಪಿಕಾ ರೆಡ್ಡಿ, ಆನಂದ್ ಹಾಗೂ ಮೊಹಮ್ಮದ್ ನಲಪಾಡ್ ಮತ್ತಿತರು ಈ ಸಂದರ್ಭ ಮಾತನಾಡಿದರು.