ಬೆಂಗಳೂರು: ಬಡವರಿಗೆ ಎರಡು ಕೆ.ಜಿ. ಅಕ್ಕಿ ಕೊಡುವುದು ಯಾವ ನ್ಯಾಯ ಎಂದು ಕೇಳಿದ ವ್ಯಕ್ತಿಯನ್ನು ಹೋಗಿ ಸಾಯಿ ಎಂದ ಸಚಿವ ಉಮೇಶ್ ಕತ್ತಿ ಅವರ ಅಣಕು ಶವಯಾತ್ರೆ ಹಾಗೂ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಆವರಣದಲ್ಲಿ ಸಂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವರ ರಾಜೀನಾಮೆಗೆ ಒತ್ತಾಯಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಯುವ ಮುಖಂಡರಾದ ನಲಪಾಡ್, ಮನೋಹರ್, ಸಲೀಂ ಮತ್ತಿತರರು ಪಾಲ್ಗೊಂಡರು. ಉಮೇಶ್ ಕತ್ತಿ ನಿಲುವು ಹಾಗೂ ರಾಜ್ಯ ಸರ್ಕಾರ ಇದುವರೆಗೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಉಮೇಶ್ ಕತ್ತಿ ಅಣಕು ಶವ ಇಟ್ಟು ಪ್ರತಿಭಟನೆ ನಡೆಸಿದರು. ಅಣಕು ಶವವನ್ನು ಹೊತ್ತು ಐದು ಮಂದಿ ಸಿಎಂ ನಿವಾಸದತ್ತ ತೆರಳಲು ಮುಂದಾದಾಗ ಕಾಂಗ್ರೆಸ್ ಭವನದ ಪ್ರವೇಶದ್ವಾರದಲ್ಲಿ ತಡೆದ ಪೊಲೀಸರು ಅಲ್ಲಿಂದ ಮುಂದೆ ಹೋಗಲು ಅವಕಾಶ ನೀಡಲಿಲ್ಲ.
ಪೊಲೀಸರ ನಿಲುವು ಖಂಡಿಸಿ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಭವನದಲ್ಲಿಯೇ ಹೆಣದ ಮೆರವಣಿಗೆ ನಡೆಸಿ ಮಡಕೆ ಒಡೆದು ಬೆಂಕಿ ಹಚ್ಚಿ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಣಕು ಶವದ ಅಂತ್ಯಸಂಸ್ಕಾರ ನೆರವೇರಿದೆ ಎಂದು ಕೈಕಾಲು ತೊಳೆದುಕೊಂಡು ಕಾಂಗ್ರೆಸ್ ನಾಯಕರು ಅಲ್ಲಿಂದ ತೆರಳಿದರು.
ಇದನ್ನು ಓದಿ: ಅಕ್ಕಿ ಹೆಸರಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡ್ತಿದ್ದಾರೆ : ಸಚಿವ ಉಮೇಶ್ ಕತ್ತಿ ಆಕ್ರೋಶ