ಬೆಂಗಳೂರು : ಚಿತ್ರನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮುಖ್ಯಸ್ಥ ಸಂದೀಪ್ ಅನಬೇರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜನ ಬೆಂಗಳೂರು ತೊರೆಯುತ್ತಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಇದೇ ರೀತಿ ತೆರಳುತ್ತಿರುವ ವ್ಯಕ್ತಿಗಳ ಸಂದರ್ಶನ ಮಾಡಿದ್ದು, ತಮ್ಮನ್ನು ಹೋಲುವಂತಹ ವ್ಯಕ್ತಿ ನೀಡಿರುವ ಪ್ರತಿಕ್ರಿಯೆಗೆ, ನಾನೇ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಫೋಟೋ ಪ್ರಕಟಿಸಿದ್ದಾರೆ ಎಂದು ಆಕ್ರೋಶಿತರಾದರು.
ತಾವು ಯುವ ಕಾಂಗ್ರೆಸ್ನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಮ್ಮ ವಿರುದ್ಧ ಇಲ್ಲಸಲ್ಲದ ಅವಹೇಳನ ಮಾಡಿರುವ ಜಗ್ಗೇಶ್ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ತಾವು ಹಾಕಿರುವ ಪೋಸ್ಟ್‌ನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಈ ವಿಚಾರ ಹಂಚಿಕೊಂಡ ಅವರು, ತಾವು ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದೇನೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆ ಎಂದಿದ್ದಾರೆ.
ಬಿಜೆಪಿಯಿಂದ ಸತ್ಯ ಮರೆಮಾಚುವ ಕ್ರಿಯೆ : ಚಿಕ್ಕಮಗಳೂರು ಮೂಲದ ವ್ಯಕ್ತಿ ಮಾತನಾಡಿರುವುದನ್ನು ನನ್ನ ಫೋಟೋದ ಜೊತೆ ತಳುಕು ಹಾಕಿ ಸತ್ಯ ಮರೆಮಾಚುವ ಕಾರ್ಯವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಜಗ್ಗೇಶ್ ಅವರೇ ಇದರಲ್ಲಿ ನೇರ ಪಾತ್ರಧಾರಿ. ಒಂದು ಉತ್ತಮ ಸ್ಥಾನದಲ್ಲಿದ್ದವರು ಇಂತಹ ಕಾರ್ಯ ಮಾಡುವುದು ಎಷ್ಟು ಸರಿ?. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಇವರು ಮಾಡಿರುವ ಆರೋಪ ಎಷ್ಟು ಸರಿ? ಕೂಡಲೇ ಇವರು ತಮ್ಮ ಟ್ವೀಟ್‌ನ ಡಿಲೀಟ್ ಮಾಡಿ ಜನತೆಯ ಕ್ಷಮೆ ಕೋರಬೇಕು. ಈ ಕಾರ್ಯ ಮಾಡದೇ ಹೋದಲ್ಲಿ ರಾಜ್ಯಾದ್ಯಂತ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿ ವರ್ಷವಿಡೀ ನ್ಯಾಯಾಲಯಕ್ಕೆ ಅಲಿಯುವ ಸ್ಥಿತಿ ತರುತ್ತೇವೆ ಎಂದು ಎಚ್ಚರಿಸಿದರು.
ಪಕ್ಷದ ವತಿಯಿಂದ ಸೂಕ್ತ ಕ್ರಮ : ಪಕ್ಷದ ಎಲ್ಲ ನಾಯಕರ ಬೆಂಬಲ, ಸಹಕಾರ ನನಗಿದೆ. ಅಲ್ಲಿ ಮಾತನಾಡಿರುವ ವ್ಯಕ್ತಿ ನಾನಲ್ಲ ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಿದೆ. ಅಲ್ಲಿ ಮಾತನಾಡಿರುವ ವ್ಯಕ್ತಿಗೆ ಗಡ್ಡ ಇಲ್ಲ. ಅವರು ಧರಿಸಿರುವ ಮಾಸ್ಕ್ ಆ ರೀತಿ ಗೋಚರಿಸುತ್ತಿದೆ. ನನ್ನ ರೀತಿ ಟೋಪಿ ಧರಿಸಿದ್ದ ಅಥವಾ ಹೋಲಿಕೆ ಇರುವ ಮಾತ್ರಕ್ಕೆ ಅದು ನಾನಾಗಲು ಸಾಧ್ಯವಿಲ್ಲ. ಕೇವಲ ಎರಡು ದಿನಗಳಲ್ಲಿ ಅಷ್ಟೊಂದು ಗಡ್ಡ ಬೆಳೆಯಲು ಸಾಧ್ಯವೇ? ಜಗ್ಗೇಶ್ ಜೊತೆ ಇನ್ನೂ ಹಲವು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಹರಿ ಬಿಟ್ಟಿದ್ದಾರೆ.
ಬಿಜೆಪಿಯಿಂದ ಇಲ್ಲಸಲ್ಲದ ಆರೋಪ: ಇವರ ಪರವಾಗಿ ಮಾತನಾಡಿದ ಮಾಜಿ ಸಂಸದ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ ಎಸ್ ಉಗ್ರಪ್ಪ, ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿರುವ ಹಿನ್ನೆಲೆ ಭಯಗೊಂಡು ನಾವು ನಮ್ಮ ಊರುಗಳಿಗೆ ತೆರಳುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದನ್ನೇ ತಿರುಚಿ ನಮ್ಮ ಯುವ ಮುಖಂಡ ಸಂದೀಪ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದರು.
ಇವರ ವಿರುದ್ಧ ಸುಳ್ಳು ಸುದ್ದಿ ಮಾಡಿ ಜಗ್ಗೇಶ್ ರೀತಿಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಜನಸಾಮಾನ್ಯರ ಆಕ್ರೋಶವಲ್ಲ. ಇದು ಕಾಂಗ್ರೆಸ್ ನಾಯಕರು ಸೃಷ್ಟಿಸುತ್ತಿರುವ ಆಕ್ರೋಶ ಎಂದು ಜನರ ಮನಸ್ಸಿನಲ್ಲಿ ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ತಿಳಿಸಿದರು.
ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರಾಗಲಿ, ನಾಯಕರಾಗಲಿ ಇಂತಹ ಕಾರ್ಯವನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಜನ ನೀಡಿರುವ ಸತ್ಯ ಸಂಗತಿಯನ್ನು ಜೀರ್ಣಿಸಿಕೊಳ್ಳಲಾಗದೆ ಬಿಜೆಪಿಯವರು ಇಂತಹ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದು ಕಾನೂನು ರೀತಿಯ ಅಪರಾಧ ಎಂದು ನಮ್ಮ ನಾಯಕರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದರು.
ನಂತರ ಮಾತನಾಡಿದ ಅವರು, ಪೊಲೀಸರು ಈ ದೂರಿನ ಎಫ್ಐಆರ್ ದಾಖಲಿಸಿಕೊಳ್ಳಬೇಕಿತ್ತು. ಆದರೆ, ನೋಟಿಸ್ ನೀಡುವುದಾಗಿ ಮಾತ್ರ ಅವರು ತಿಳಿಸಿದ್ದಾರೆ. ಸರ್ಕಾರ ಸರಿಯಾಗಿ ಕೆಲಸ ಮಾಡಿಲ್ಲ. ಇದೀಗ ಜನರ ಆಕ್ರೋಶವನ್ನು ಕೂಡ ಇವರಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೂಡಲೇ ಈ ವಿಚಾರವಾಗಿ ಬಿಜೆಪಿ ನಾಯಕರು ಕ್ಷಮೆ ಕೋರಬೇಕು ಹಾಗೂ ಸಂಬಂಧಿಸಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದರು.