ಬೆಂಗಳೂರು: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ 'ಪಾಕಿಸ್ತಾನ ಜಿಂದಾಬಾದ್' ಕೂಗಿದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ವೇದಿಕೆ ಮೇಲೆ ಆಸೀನರಾಗಿದ್ದ ಯುವ ಹೋರಾಟಗಾರ್ತಿ ಅಮೂಲ್ಯ ಎಂಬಾಕೆ ಮೈಕ್ ಕೈಗೆತ್ತಿಕೊಂಡು 'ಪಾಕಿಸ್ತಾನಕ್ಕೆ ಜಿಂದಾಬಾದ್' ಎಂದು ಮೂರು ಬಾರಿ ಘೋಷಣೆ ಕೂಗಿದಳು. ಕೂಡಲೇ ಸಂಸದ ಅಸಾದುದ್ದೀನ್ ಒವೈಸಿ ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಇಷ್ಟಾದರೂ ಮಾತನಾಡುವುದನ್ನು ಮುಂದುವರೆಸಿದ ಅಮೂಲ್ಯ ಅವರಿಂದ ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು.
ತಕ್ಷಣ ಪಶ್ಚಿಮ ವಿಭಾಗ ಪೊಲೀಸರು ಮಧ್ಯಪ್ರವೇಶಿಸಿ ಆಕೆಯನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಸ್ಥಳದಲ್ಲಿ ನೂಕು-ನುಗ್ಗಲು ಆರಂಭವಾಯಿತು. ಇದೇ ವೇಳೆ, ಚುಟುಕಾಗಿ ಮಾತನಾಡಿದ ಒವೈಸಿ, 'ಪಾಕಿಸ್ತಾನಕ್ಕೆ ಜಿಂದಾಬಾದ್' ಎಂದು ಕೂಗಿರುವುದು ಸರಿಯಲ್ಲ. ಆಯೋಜಕರಿಗೂ ಘೋಷಣೆ ಕೂಗಿರುವ ಯುವತಿಗೂ ಸಂಬಂಧವಿಲ್ಲ. ನಮ್ಮ ಶತ್ರು ರಾಷ್ಟ್ರವನ್ನು ಹೊಗಳುವುದು ಸರಿಯಲ್ಲ. ಹಿಂದೂ ಹಾಗೂ ಮುಸ್ಲಿಂಮರು ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿ ಮುನಿಸಿಕೊಂಡು ಮಾತು ನಿಲ್ಲಿಸಿದರು.
ಬಳಿಕ ಬಿಬಿಎಂಪಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಮಾತನಾಡಿ, ಶಾಂತಿಯುತ ಪ್ರತಿಭಟನೆಗೆ ಘೋಷಣೆ ಕೂಗಿದ ಅಮೂಲ್ಯಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಿರಲಿಲ್ಲ. ಹೀಗಿದ್ದರೂ ಆಕೆ ಬಂದಿರುವುದು ಹೇಗೆ ಅಂತಾ ಗೊತ್ತಾಗಿಲ್ಲ. ವಿವಾದಾತ್ಮಕ ಘೋಷಣೆ ಕೂಗಿದ ಯುವತಿ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಶಕ್ಕೆ ಪಡೆದು ಪಡೆದ ಯುವತಿಯ ತನಿಖೆ ಮುಂದುವರೆಸಿದ್ದಾರೆ. ಹಿಂದೂ-ಮುಸ್ಲಿಂ-ಸಿಖ್-ಈಸಾಯಿ ಫೆಡರೇಷನ್ ಸಹಯೋಗದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಹಲವಾರು ರಾಷ್ಟ್ರೀಯ ನಾಯಕರು ಭಾಗಿಯಾಗಿದ್ದರು.