ಬೆಂಗಳೂರು: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಲಭ ಶೌಚಾಲಯದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
19 ವರ್ಷದ ಆಕಾಶ್ ಕೊಲೆಯಾದ ಮೃತ ದುರ್ದೈವಿ. ಹೊಂಬೇಗೌಡ ನಗರ ಬಳಿಯ ಸ್ಲಂ ಬಳಿ ವಾಸವಾಗಿದ್ದ ಯುವಕ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಮೂತ್ರ ವಿಸರ್ಜನೆಗಾಗಿ ನಿನ್ನೆ ಏರಿಯಾ ಬಳಿಯಿರುವ ಸುಲಭ ಶೌಚಾಲಯಕ್ಕೆ ಹೋಗಿದ್ದಾಗ ಖಚಿತ ಮಾಹಿತಿ ಮೇರೆಗೆ ನಾಲ್ವರು ಹಂತಕರ ಗುಂಪು ಒಳನುಗ್ಗಿ ರಾಡ್ ಹಾಗೂ ಆಯುಧಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ. ಸಾರ್ವಜನಿಕರೊಬ್ಬರು ಶೌಚಾಲಯಕ್ಕೆ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ.
ಕೊಲೆಗೆ ಕಾರಣವೇನು?
ಆಕಾಶ್ ತಂದೆ ವೇಣು ಹಾಗೂ ರಾಜಾವೇಲು ಸ್ನೇಹಿತರಾಗಿದ್ದರು. ಕೆಲ ದಿನಗಳ ಹಿಂದೆ ವಿಲ್ಸನ್ ಗಾರ್ಡನ್ ಬಳಿ ಇರೋ ಬಾರ್ಗೆ ಕುಡಿಯಲು ಹೋಗಿದ್ದರಂತೆ. ಈ ವೇಳೆ ಮದ್ಯ ಸೇವಿಸಿ ಬರುವಾಗ ಮಾರ್ಗ ಮಧ್ಯೆ ರಾಜವೇಲು ಮೃತಪಟ್ಟಿದ್ದ. ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು.
ರಾಜುವೇಲುನನ್ನು ಮೃತ ಯುವಕನ ತಂದೆ ವೇಣುವೇ ಕೊಲೆ ಮಾಡಿದ್ದಾನೆಂದು ರಾಜುವೇಲು ಕಡೆಯವರು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ವೇಣು ಆರೋಪಿಗಳಿಗೆ ಸಿಕ್ಕಿರಲ್ಲಿಲ್ಲ. ನಿನ್ನೆ ರಾತ್ರಿ ವೇಣು ಪುತ್ರ ಆಕಾಶ್, ರಾಜುವೇಲು ಕಡೆಯವರಿಗೆ ಸಿಕ್ಕಿದ್ದಾನೆ. ಈ ವೇಳೆ ಆತನನ್ನ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಓದಿ: ಕೆಲಸವಿಲ್ಲದೆ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಯುವಕ
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಈಗಾಗಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.