ಬೆಂಗಳೂರು: ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನ. ಶರೀರವನ್ನು ಆರೋಗ್ಯವಾಗಿ, ಸದೃಢವಾಗಿಟ್ಟುಕೊಳ್ಳುವಲ್ಲಿ ಯೋಗ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಸಹಜ ಸ್ಥಿತಿಯಲ್ಲಿದ್ದಾಗ ಇದು ಸರಿ. ಗರ್ಭಿಣಿಯರು ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಯೋಗಾಸನದ ಮೊರೆ ಹೋಗಬಹುದಾ? ಗರ್ಭಿಣಿಯರಿಗೆ ಸಾಕಷ್ಟು ನಿರ್ಬಂಧಗಳು ಇರುತ್ತವೆ. ಮಗುವಿಗೆ ಜನ್ಮ ನೀಡುವ ಮಹಿಳೆ ಕೆಲವೊಂದಿಷ್ಟು ಚಟುವಟಿಕೆಯಲ್ಲಿ ಭಾಗಿಯಾಗಬಾರದು ಎಂಬ ಕಟ್ಟುಪಾಡುಗಳು ಇರುತ್ತವೆ.
ಆದರೆ ವೈಜ್ಞಾನಿಕವಾಗಿ ಒಂದಿಷ್ಟು ಚಟುವಟಿಕೆ, ವ್ಯಾಯಾಮ ಹಾಗೂ ದೇಹದಂಡನೆ ಮಾಡಿಕೊಂಡರೆ ಮುಂದೆ ಜನಿಸುವ ಮಗು ಆರೋಗ್ಯವಾಗಿದ್ದು, ಲವಲವಿಕೆಯಿಂದ ಕೂಡಿರುತ್ತದೆ ಎನ್ನುವುದು ಸಾಬೀತಾಗಿದೆ. ಸಹಜ ಸ್ಥಿತಿಯಲ್ಲಿ ಮಹಿಳೆಯರು ಕೈಗೊಳ್ಳುವ ಯೋಗಕ್ಕೂ, ಗರ್ಭಾವಸ್ಥೆಯಲ್ಲಿರುವಾಗ ಕೈಗೊಳ್ಳುವ ಯೋಗಕ್ಕೂ ವ್ಯತ್ಯಾಸ ಬಹಳಷ್ಟಿದೆ. ಗರ್ಭಿಣಿಯರು ಕೆಲವೊಂದಿಷ್ಟು ಆಸನವನ್ನು ಹಾಕುವುದರಿಂದ ಅನುಕೂಲವೇ ಹೆಚ್ಚು ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
ಗರ್ಭಿಣಿಯರಿಗೆ ಕಾಣಿಸಿಕೊಳ್ಳುವ ಸಮಸ್ಯೆಗಳು: ಸಾಮಾನ್ಯವಾಗಿ ಗರ್ಭಿಣಿಯರಿಗೆ ಸೊಂಟ ನೋವು, ಕಾಲು ನೋವು, ಕಾಲು ಊತ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳ ನಿವಾರಣೆಗೆ ಯೋಗದಿಂದ ಆಗುವ ಲಾಭಗಳು ಸಾಕಷ್ಟಿವೆ. ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಯೋಗ ಪರಿಹಾರವಾಗಲಿದೆ. ಒತ್ತಡವನ್ನು ಕಡಿಮೆಗೊಳಿಸಿ, ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯ ಗರ್ಭಧಾರಣೆಗೆ ಯೋಗ ಸಹಾಯ ಮಾಡಲಿದ್ದು, ದಿನವೂ ಯೋಗ ಮಾಡುವುದು ಒಳ್ಳೆಯದು ಎನ್ನುತ್ತಾರೆ ಬೆಂಗಳೂರಿನ ಕಿಂಡರ್ ಮಹಿಳಾ ಆಸ್ಪತ್ರೆ ಮತ್ತು ಫಲವತ್ತತೆ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಹಿರಿಯ ಸಮಾಲೋಚಕಿ ಡಾ. ಕವಿತಾ ಜಿ. ಪೂಜಾರ್.
ಗರ್ಭಿಣಿಯರು ಮಾಡಬೇಕಾದ ಯೋಗಾಸನ: ಗರ್ಭಿಣಿಯರು ವೈದ್ಯರ ಸಲಹೆ ಪಡೆದು ಬೆಳಗ್ಗೆ ಮತ್ತು ಸಂಜೆ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಪ್ಲಾಸೆಂಟಲ್ ಸಮಸ್ಯೆ, ಹೆಚ್ಚು ಬಿ.ಪಿ ತೊಂದರೆ ಇರುವವರು ಕಾಳಜಿ ವಹಿಸಬೇಕು. ಗರ್ಭಿಣಿಯರಿಗೆಂದು ಇರುವ ಆರು ಮುಖ್ಯ ಯೋಗ ಆಸನಗಳು ಈ ಕೆಳಗಿನಂತಿವೆ ಎಂಬ ವಿವರವನ್ನು ಡಾ. ಕವಿತಾ ಜಿ. ಪೂಜಾರ್ ನೀಡಿದ್ದಾರೆ.
1. ತಾಡಾಸನ: ಮೊದಲು ನೇರವಾಗಿ ನಿಲ್ಲಬೇಕು, ನಂತರ ಎರಡು ಕೈಗಳನ್ನು ಕೂಡಿಸಿ ಕೈಗಳನ್ನು ಮೇಲೆ ಎತ್ತಬೇಕು, ನಂತರ ಹಿಮ್ಮಡಿಯನ್ನು ನಿಧಾನವಾಗಿ ಮೇಲೆ ಎತ್ತಿ.
ತಾಡಾಸನದ ಉಪಯೋಗಗಳು : ಕಾಲು ನೋವು ಮತ್ತು ಕಾಲು ಊತ ಕಡಿಮೆ ಆಗುತ್ತದೆ.
2. ವೀರಭದ್ರಾಸನ: ಮೊದಲು ಬಲಗಾಲನ್ನು ಮುಂದಿಟ್ಟು ಎರಡು ಕೈಯನ್ನು ಮೇಲೆತ್ತಿ, ಸ್ವಲ್ಪ ಸೊಂಟ ಕೆಳಗಡೆ ಇಳಿಸಿ.
3. ತ್ರಿಕೋನಾಸನ: ಮೊದಲು ಎರಡು ಕಾಲನ್ನು ಮತ್ತು ಕೈಗಳನ್ನು ಅಗಲಿಸಿಕೊಳ್ಳಿ, ನಂತರ ಬಲ ಕೈಯನ್ನು ಬಲ ಕಾಲಿಗೆ ಮುಟ್ಟಿಸಿ, ದೃಷ್ಟಿ ಎಡಗೈನತ್ತ ನೆಟ್ಟಿರಲಿ.
ವೀರಭದ್ರಾಸನ ಮತ್ತು ತ್ರಿಕೋನಾಸನಗಳ ಪ್ರಯೋಜನಗಳು: ಪೆಲ್ವಿನ್ ಮಸಲ್ ಶಕ್ತಿ ವೃದ್ಧಿಯಾಗುತ್ತದೆ. ಇದು ಸಾಮಾನ್ಯ ಗರ್ಭಧಾರಣೆಗೆ ಸಹಕಾರಿಯಾಗಲಿದ್ದು, ಸೊಂಟ ನೋವು, ಬೆನ್ನು ನೋವು ಸಮಸ್ಯೆಗಳು ಕಡಿಮೆಯಾಗಲಿವೆ.
4. ಚಿಟ್ಟೆ ಆಸನ: ಈ ಭಂಗಿಯಲ್ಲಿ ನೀವು ಚಿಟ್ಟೆಯಂತೆ ಕುಳಿತು ಎರಡು ಪಾದಗಳನ್ನು ಒಟ್ಟಿಗೆ ಸೇರಿಸಿಕೊಂಡು ನೇರವಾಗಿ ಕುಳಿತುಕೊಳ್ಳಬೇಕು, ನಂತರ ತೊಡೆಯನ್ನು ಚಿಟ್ಟೆ ರೆಕ್ಕೆ ಬಡೆಯುವಂತೆ ಮೇಲಕ್ಕೆ ಕೆಳಕ್ಕೆ ಆಡಿಸಬೇಕು. ಇದನ್ನು ಗರ್ಭಿಣಿಯರು ಮೆಲ್ಲಗೆ ಮಾಡಬೇಕು. ಇದರಿಂದ ಪೆಲ್ವಿಕ್ ಸ್ತ್ರೀಚ್ಜ್ ಸರಿಯಾಗಿ ಆಗುತ್ತದೆ.
5.ಮಾರ್ಜಾಲಾಸನ: ಬೆಕ್ಕಿನ ಆಕಾರದಲ್ಲಿ ಕುಳಿತು, ಬೆನ್ನನ್ನು ಒಳಗೆ ಎಳೆದುಕೊಂಡು ತಲೆಯನ್ನು ಮೇಲೆತ್ತಿ ನಂತರ ಬೆನ್ನನ್ನು ಹೊರಗಡೆ ತಳ್ಳಿ, ಇದು ಕ್ಯಾಮೆಲ್ ಆಕಾರದಲ್ಲಿ ಇರಲಿ.
ಮಾರ್ಜಾಲಾಸನ ಪ್ರಯೋಜನಗಳು: ಸ್ಪಿನ್ ಸ್ತ್ರೀಚ್ ಆಗಲು ಸಹಕಾರಿ ಹಾಗೂ ಪೆಲ್ವಿಕ್ ಮಸಲ್ ಶಕ್ತಿ ವೃದ್ಧಿಯಾಗುತ್ತದೆ.
6.ಮಲಾಸನ: ಕಾಲುಗಳನ್ನು ಹಾಗೆ ಹಿಂದಕ್ಕೆ ತನ್ನಿ ಮತ್ತು ಪಾದಗಳ ಮೇಲೆ ಕುಳಿತುಕೊಳ್ಳಿ. ಮೊಣಕಾಲನ್ನು ಹಾಗೆ ಮಡಚಿ ಮತ್ತು ಬೆನ್ನು ನೇರವಾಗಿ ಇರಲಿ. ತೊಡೆಗಳನ್ನು ದೂರ ಮಾಡಿಕೊಂಡು ಉಸಿರು ಬಿಡಿ. ತೊಡೆಯ ಮಧ್ಯೆ ಹಣೆಯು ನಿಲ್ಲುವಂತೆ ಮಾಡಿ. ನಮಸ್ಕಾರ ಮಾಡುವ ರೀತಿ ಕುಳಿತುಕೊಳ್ಳಿ. ಪ್ರಾರ್ಥನೆಯ ಭಂಗಿಯಲ್ಲಿ ಅಂಗೈಗಳನ್ನು ಜೋಡಿಸಿ. ಮೊಣಕೈಗಳನ್ನು ನೆಲಕ್ಕೂರಿ, ಮೊಣಕಾಲಿನ ಹಿಂಭಾಗಕ್ಕೆ ಎತ್ತಿಕೊಳ್ಳಿ. ಇದರಿಂದ ಹಣೆಯು ಬಲವಾಗುವುದು.
ಮಲಾಸನ ಉಪಯೋಗಗಳು: ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆಗೆ ನೆರವಾಗುವುದು. ಹಿಂಗಾಲು ಮತ್ತು ಮೊಣಕಾಲಿನ ಹಿಂಭಾಗದ ಸ್ನಾಯುಗಳನ್ನು ಬಲಪಡಿಸುವುದು. ಬೆನ್ನಿನ ಕೆಳಭಾಗವು ಆರಾಮಾಗಿರಲು ನೆರವಾಗುವುದು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2022: ಯೋಗಾಸಕ್ತರಿಗೆ ಉಪಯುಕ್ತ ಮಾಹಿತಿ