ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ತಡ ರಾತ್ರಿಯವರೆಗೆ ಧಾರಾಕಾರ ಮಳೆಯಾಗಿದೆ. ನಗರದ ಹೊಂಗ ಸಂದ್ರ ವಾರ್ಡ್‌ನ ಗಾರ್ವೆಬಾವಿಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಇನ್ನು ನಗರದ ವಿವಿಧೆಡೆ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಿದರು.
ನಗರದಲ್ಲಿ ಸತತ 10 ದಿನದಿಂದ ಮಳೆ ಸುರಿಯುತ್ತಿದೆ. ಕೆಲವು ಪ್ರದೇಶಗಳಲ್ಲಿ 80 ಮಿ.ಮೀ. ಮಳೆಯಾಗುತ್ತಿದ್ದು, ಮನೆಗೆ ನೀರು ನುಗ್ಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಯಲಹಂಕ ಸುತ್ತಲಿನ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಮೈಸೂರು, ತುಮಕೂರು, ಬಳ್ಳಾರಿ ಹಾಗು ಹೊಸೂರು ರಸ್ತೆಗಳಲ್ಲಿ ಸಾಮಾನ್ಯ ದಿನಕ್ಕಿಂತಲೂ ಅಧಿಕ ಟ್ರಾಫಿಕ್ ಉಂಟಾಗಿತ್ತು. ರಾತ್ರಿ ಸುರಿದ ಮಳೆಯ ರಭಸಕ್ಕೆ ರಸ್ತೆಯೇ ಕಾಣದಂತಾಗಿತ್ತು.
ಕೆಲವು ವಾಹನಗಳು ಅಂಡರ್‌ಪಾಸ್‌ನಲ್ಲಿ ದಾಟಲು ಸಾಧ್ಯವಾಗದೆ ಕೆಲಹೊತ್ತು ಅಲ್ಲಿಯೇ ನಿಂತುಕೊಂಡಿದ್ದರು. ಒಂದೆಡೆ ಬೈಕ್ ನಿಲ್ಲಿಸಿ ಮಳೆ ನಿಲ್ಲುವುದನ್ನೂ ಕಾದು ಕಾದು ಹೈರಾಣಾದರು.
ವಾಡಿಕೆಗಿಂತ ಶೇ.73ರಷ್ಟು ಹೆಚ್ಚು ಮಳೆ: ಈಶಾನ್ಯ ಮಾರುತಗಳ ಪ್ರಭಾವದಿಂದ ನಗರದಲ್ಲಿ ಮಳೆ ಅಬ್ಬರ ಜೋರಾಗಿದೆ. ಅಕ್ಟೋಬರ್ 1ರಿಂದ ಅ.13 ರವರೆಗೆ ಒಟ್ಟಾರೆ 75 ಮಿ.ಮೀ ಬದಲಾಗಿ 130 ಮಿ.ಮೀ ಮಳೆಯಾಗಿದ್ದು, ವಾಡಿಕೆಕ್ಕಿಂತ ಶೇ.73 ಹೆಚ್ಚು ಮಳೆ ಬಂದಿದೆ. ನೈಋತ್ಯ ಮಾರುತಗಳ ಪ್ರಭಾವದಿಂದ ಕಳೆದ ಜುಲೈ 1ರಿಂದ ಸೆಪ್ಟೆಂಬರ್ 30 ರವರೆಗೆ ನಗರದಲ್ಲಿ 470 ಮಿ.ಮೀ ಮಳೆಯಾಗುವ ಬದಲಾಗಿ 468 ಮಿ.ಮೀ ಮಳೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯೆಲ್ಲೋ ಅಲರ್ಟ್: ನಗರದಲ್ಲಿ ಅಕ್ಟೋಬರ್ 13 ರಿಂದ 16ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.