ಬೆಂಗಳೂರು : ವಾಯುಭಾರ ಕುಸಿತ ದಕ್ಷಿಣ ಬಂಗಾಳ ಉಪಸಾಗರದಲ್ಲಿದೆ. ನವೆಂಬರ್ 25ರಂದು ತಮಿಳುನಾಡು ಹಾಗೂ ಪಾಂಡಿಚೇರಿಗೆ ತಲುಪಲಿದೆ. ಇದರ ಪರಿಣಾಮದಿಂದ ಬೆಂಗಳೂರಿನಲ್ಲಿ ನವೆಂಬರ್ 24 ಹಾಗೂ 25ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಮಂಡ್ಯ, ಚಾಮರಾಜನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲೋ ಅಲರ್ಟ್ ಅನ್ನು ನವೆಂಬರ್ 25ರಂದು ಘೋಷಿಸಲಾಗಿದೆ. ಇಂದು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಮುಂದುವರೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಣಿಯಲ್ಲಿ 2 ಸೆಂ.ಮೀ ಮಳೆಯಾಗಿದ್ದು, ಮಂಗಳೂರಿನಲ್ಲಿ 1 ಸೆಂ.ಮೀ ಮಳೆಯಾಗಿದೆ. ಕನಿಷ್ಠ ಹಾಗೂ ಗರಿಷ್ಠ ಉಷ್ಣಾಂಶ ರಾಜ್ಯದಲ್ಲಿ ಸಾಮಾನ್ಯ ಮಟ್ಟದಲ್ಲಿದ್ದು, ಧಾರವಾಡದಲ್ಲಿ ಕನಿಷ್ಠ ಉಷ್ಣಾಂಶ 14.4 ಡಿಗ್ರಿ, ಹಾವೇರಿಯಲ್ಲಿ 13 ಡಿಗ್ರಿ ದಾಖಲಾಗಿದೆ.
ನವೆಂಬರ್ 21 ರಿಂದ 25ರವರೆಗೆ ಉತ್ತರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯುವ ಹೆಚ್ಚಿನ ಸಾಧ್ಯತೆ ಇದೆ ಎಂದು ಎಂದು ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.