ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಇನ್ನೂ ಎರಡು ದಿನ ಮುಂದುವರೆಯಲಿದೆ. ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆಯಲಿದ್ದು, ಹವಾಮಾನ ಇಲಾಖೆಯು 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಶನಿವಾರವೂ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಮುಖ್ಯವಾಗಿ ಉತ್ತರ ಕನ್ನಡದ ಅಂಕೋಲಾ ಮತ್ತು ಬೆಳಗಾವಿಯ ಲೋಂಡದಲ್ಲಿ ತಲಾ 7 ಸೆಂ.ಮೀ ಮಳೆ ದಾಖಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಗದಗ, ಧಾರವಾಡದಲ್ಲಿ ಸಪ್ಟೆಂಬರ್ 11 ಮತ್ತು 12ರಂದು ಹಾಗೂ ಹಾವೇರಿ, ಕಲಬುರಗಿ, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ಮುಂದಿನ 24 ಗಂಟೆ ಬಿರುಸಿನ ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಕೆಲ ದಿನಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಮೂರು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡಿನ ಬಹುತೇಕ ಜಿಲ್ಲೆಗಳಲ್ಲಿಯೂ ಮಳೆ ಕೊಂಚ ಇಳಿಮುಖವಾಗಿದೆ. ಕೆಲವೆಡೆ ಮಾತ್ರ ಚದುರಿದಂತೆ ಸಾಧಾರಣವಾಗಿ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮೇಘಸ್ಫೋಟಕ್ಕೆ ಪಿಥೋರಗಢದ ಖೋಟಿಲಾ ತತ್ತರ..ಭಾರಿ ವಿನಾಶ