ಬೆಂಗಳೂರು: ನಿವಾರ್ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಇಂದು ಮಧ್ಯರಾತ್ರಿಯಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, ಇಂದು ರಾಜ್ಯಾದ್ಯಂತ ಒಣಹವೆ ಮುಂದುವರೆದಿದೆ. ನಿವಾರ್ ಚಂಡಮಾರುತ ನೈರುತ್ಯ ಬಂಗಾಳ ಉಪಸಾಗರದಲ್ಲಿದೆ. ಪುದುಚೇರಿಯಿಂದ 750 ಕಿ.ಮೀ., ಚೆನ್ನೈನಿಂದ 300 ಕಿ.ಮೀ. ದೂರ ಇದ್ದು, ವಾಯುವ್ಯ ದಿಕ್ಕಿನೆಡೆಗೆ ಬೀಸಲಿದೆ. ನವೆಂಬರ್ 25ರಂದು ಮಧ್ಯರಾತ್ರಿ ಕಾರೈಕಲ್ ಪ್ರದೇಶದಲ್ಲಿ ನಿವಾರ್ ಹಾದು ಹೋಗಲಿದೆ. ಗಾಳಿಯ ವೇಗ ಪ್ರತೀ ಗಂಟೆಗೆ 120ರಿಂದ 130 ಕಿ.ಮೀ. ತಲುಪುವ ಸಾಧ್ಯತೆ ಇದೆ. ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ-ನಗರದ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದರು.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನ. 25, 28 ಮತ್ತು 29ರಂದು ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ನ. 26 ಮತ್ತು 27ರಂದು ಹೆಚ್ಚು ಮಳೆಯಾಗಲಿದೆ.
ಉತ್ತರ ಒಳನಾಡಿನಲ್ಲಿ 25 ಮತ್ತು 29ರಂದು ಒಣಹವೆ ಇರಲಿದ್ದು , ನ. 26 ಮತ್ತು 28ರಂದು ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ನ. 27ರಂದು ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ನ. 26 ಮತ್ತು 28ರಂದು ಅಲ್ಲಲ್ಲಿ ಮಳೆಯಾಗಲಿದ್ದು, ನ. 27ರಂದು ಹಲವು ಕಡೆ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.