ಬೆಂಗಳೂರು: ನನ್ನ ಬಗ್ಗೆ ಇದ್ದ ತಪ್ಪು ತಿಳುವಳಿಕೆ ಸರಿಯಾಗಿದೆ. ಕೊಳೆ ಎಲ್ಲಾ ಹೋಗಿ ಯತ್ನಾಳ್ ಒಬ್ಬ ಅಪ್ಪಟ ಚಿನ್ನ ಅನ್ನೋದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಎಲ್ಲರಿಗೂ ತಿಳಿದಿದೆ. ಹಾಗಾಗಿ ಹಿರಿಯರ ಸಲಹೆಯಂತೆ ಇನ್ಮುಂದೆ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಮಾತನಾಡಲ್ಲ, ನನ್ನ ಟಾರ್ಗೆಟ್ ಏನಿದ್ದರೂ ಕಾಂಗ್ರೆಸ್, ಜೆಡಿಎಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ನಾಯಕರಲ್ಲ ಎಂದು ಈ ಹಿಂದೆ ಅರುಣ್ ಸಿಂಗ್ ಹೇಳಿಕೆ ನೀಡಿದ್ದರು ಎನ್ನವುದು ನಿಜ, ರಾಜಕೀಯವಾಗಿ ತಪ್ಪು ಕಲ್ಪನೆ ಆಗಿರುತ್ತದೆ. ಯಾರೋ ಏನೋ ಹೇಳಿರುತ್ತಾರೆ. ಯತ್ನಾಳ್ ಏನು ಇಲ್ಲ, ಹಾಗೆ ಹೀಗೆ ಎಂದು ಹೇಳಿರುತ್ತಾರೆ. ಆದರೆ ಯತ್ನಾಳ್ ಏನು ಎಂದು ಈಗ ಅವರಿಗೆ ಗೊತ್ತಾಗಿದೆ. ಈ ಸತ್ಯವನ್ನು ಒಪ್ಪಿಕೊಂಡು ನಮ್ಮನ್ನ ಪ್ರೀತಿಯಿಂದ ಆಲಿಂಗನ ಮಾಡಿ ಪ್ರೀತಿ ತೋರಿಸಿದ್ದಾರೆ ಎಂದರು.
ಹಿಂದೂ ಧರ್ಮದಲ್ಲಿ ಕ್ಷಮೆಗಿಂತ ದೊಡ್ಡದು ಯಾವುದೂ ಇಲ್ಲ. ಅರುಣ್ ಸಿಂಗ್ ನಮ್ಮ ಬಳಿ ಬಂದಿದ್ದಾರೆಂದು ದುರಹಂಕಾರದಿಂದ ಮಾತನಾಡುವುದಿಲ್ಲ. ಅರುಣ್ ಸಿಂಗ್ ಬಹಳ ದೊಡ್ಡತನ ತೋರಿಸಿದ್ದಾರೆ. ಅದರ ಅರ್ಥ ನಾನು ಚಿಕ್ಕವನಾದೆ ಅವರು ದೊಡ್ಡವರಾದರು ಎಂದು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವವರು ಜಿಲ್ಲಾಧ್ಯಕ್ಷರಿಗೆ ಹೇಳಿ ನನ್ನ ಬಳಿ ಬಂದಿದ್ದಾರೆ. ಹಾಗಾಗಿ ಅವರು ದೊಡ್ಡವರಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಭಾರತೀಯ ಜನತಾ ಪಕ್ಷದಲ್ಲಿ ನಾನೀಗ ಸ್ವಚ್ಛವಾಗಿದ್ದೇನೆ, ನಾನು ಹಿಂದೆಯೂ ಕಾರ್ಯಕರ್ತ, ಈಗಲೂ ಕಾರ್ಯಕರ್ತ, ಎಂದಿಗೂ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
ಕೋರ್ ಕಮಿಟಿ ಸದಸ್ಯ ಆಗಬೇಕು ಅಂತ ನಾನು ಅರ್ಜಿ ಹಾಕಿಲ್ಲ. ಇವೆಲ್ಲಾ ರಾಜಕಾರಣದಲ್ಲಿ ಇದ್ದದ್ದೇ. ತಪ್ಪು ಕಲ್ಪನೆ ತಿಳಿ ಮಾಡಿಕೊಂಡು ಮುಂದೆ ನಡೆಯಬೇಕಿದೆ. ಪಂಚಮಸಾಲಿ ಹೋರಾಟ ವಿಚಾರವನ್ನೂ ತಿಳಿಸಿದ್ದೇನೆ. ನಾನಂತು ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಹೇಳಿದ್ದೇನೆ. ಪಾಪ ಅವರು ಶೇ.2 ಮಾತ್ರ ಇದ್ದಾರೆ. ಬ್ರಾಹ್ಮಣರನ್ನು ಅಲ್ಪಸಂಖ್ಯಾತರಿಗೆ ಸೇರಿಸಿದರೆ ವಿರೋಧ ಆಗಲ್ಲ. ಜೈನ, ಬೌದ್ಧ ಎಲ್ಲರೂ ಹಿಂದೂಗಳೇ. ಅವರು ಈಗ ಅಲ್ಪಸಂಖ್ಯಾತರಾಗಿಲ್ವಾ.? ಹಿಂದೂ ಧರ್ಮದ ರಕ್ಷಣೆಗೆ ಹುಟ್ಟಿದ್ದೇ ಸಿಖ್ ಧರ್ಮ. ಜೈನ, ಬೌದ್ಧ ಧರ್ಮ ಕೂಡ ಹಿಂದೂ ಧರ್ಮದ್ದೇ ಎಂದು ಯತ್ನಾಳ್ ಹೇಳಿದರು.
ಯಾರನ್ನೂ ಬೈಯದಂತೆ ಹಿರಿಯರು ಸೂಚಿಸಿದ್ದಾರೆ: ಯಾರ ವಿರುದ್ಧವೂ ಮಾತಾಡದಂತೆ ಹೇಳಿದ್ದಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಹೌದು ಹಿರಿಯರು ಸೂಚನೆ ನೀಡಿದ್ದಾರೆ. ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚಿಸಿದ್ದಾರೆ. ಇದಕ್ಕೆ ನಾನು ಒಪ್ಪಿದ್ದೇನೆ. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಒಪ್ಪಿದ್ದೇನೆ. ನಾನು ಬಿಜೆಪಿ ನಾಯಕರು ವಿರುದ್ಧ ಮಾತನಾಡುವುದಿಲ್ಲ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಮಾತನಾಡುತ್ತೇನೆ ಎಂದರು. ಯಡಿಯೂರಪ್ಪ ವಿರುದ್ಧವೂ ಮಾತನಾಡಲ್ಲ, ಯಡಿಯೂರಪ್ಪ ಅವರನ್ನ ಯಾಕೆ ಬೈಯ್ಯಲಿ. ಅವರು ರಾಜಕೀಯದಿಂದ ದೂರಾಗಿದ್ದಾರೆ. ಅವರೇನು ಮುಂದೆ ಮುಖ್ಯಮಂತ್ರಿ ಆಗಲ್ವಲ್ಲ. ಅವರು ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿದ್ದಾರೆ ಎಂದು ಯಡಿಯೂರಪ್ಪ ಮೇಲೆ ಸಾಫ್ಟ್ ಕಾರ್ನರ್ ತೋರಿಸಿದರು.
ನಾನು ಯಾರನ್ನು ಓಲೈಕೆ ಮಾಡುವುದಿಲ್ಲ: ಟಿಕೆಟ್ ಸಿಗಲ್ಲ ಎಂದು ಯಡಿಯೂರಪ್ಪ ಅವರನ್ನು ಓಲೈಕೆ ಮಾಡಲು ನಾನು ಬಿಎಸ್ವೈ ವಿರುದ್ಧ ಮಾತನಾಡಲ್ಲ ಎನ್ನುತ್ತಿಲ್ಲ, ನಾನು ಯಾರನ್ನು ಓಲೈಕೆ ಮಾಡುವುದಿಲ್ಲ. ಓಲೈಕೆ ಮಾಡಿಕೊಂಡು ಬಂದಿದ್ದರೆ ಯಾವತ್ತೋ ಮುಖ್ಯಮಂತ್ರಿ ಆಗುತ್ತಿದ್ದೆ. ಏನೇ ಇದ್ದರೂ ನೇರವಾಗಿ ಹೇಳುತ್ತೇನೆ. ಆದರೆ ಕೆಲವೊಂದು ವಿಷಯವನ್ನು ಸಾರ್ವತ್ರಿಕವಾಗಿ ಹೇಳಬೇಕಾಗುತ್ತದೆ ಹೇಳುತ್ತೇನೆ. ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿಗಬೇಕಾದ ಗೌರವ ಸಿಗಬೇಕು ಅಷ್ಟೇ, ನಾನು ಪಕ್ಷದ ಮುಖಂಡರ ವಿರುದ್ಧ ಮಾತನಾಡುವುದಿಲ್ಲ. ನನ್ನ ಹೋರಾಟದ ಕಾರಣದಿಂದ ಈಗ ಶಾಸಕರಿಗೆ ಅನುದಾನ ಸಿಕ್ಕಿದೆ. ಇನ್ನೂ ನೂರು ಕೋಟಿ ಕೊಟ್ಟರೆ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂದು ತಿಳಿದಿದ್ದೇನೆ ಎಂದರು.
ಕಾಂಗ್ರೆಸ್ ಹಿಂದೂಗಳ ಬಗ್ಗೆ ಮಾತನಾಡೋದು ಫ್ಯಾಷನ್ ಆಗಿದೆ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿ ಅವರ ಪಕ್ಷವನ್ನು ಎಲ್ಲೆಡೆ ಸೋಲಿಸುತ್ತಿದ್ದಾರೆ. ಅದಕ್ಕೆ ಸತೀಶ್ ಜಾರಕಿಹೊಳಿ ಕೊನೆ ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ. ದೇಶದ ಪವಿತ್ರ ಗ್ರಂಥ ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ಬರೆದರು. ಅದೇ ಸಮುದಾಯಕ್ಕೆ ಸೇರಿದ ಜಾರಕಿಹೊಳಿ ಹಿಂದೂಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಹಿಂದೂಗಳ ಬಗ್ಗೆ ಮಾತನಾಡೋದು ಫ್ಯಾಷನ್ ಆಗಿದೆ.
ವಾಲ್ಮೀಕಿ ಜನಾಂಗದ ವ್ಯಕ್ತಿ ಹಿಂದುತ್ವದ ಬಗ್ಗೆ ಮಾತನಾಡಿರೋದು ದುರಂತ, ಜನ ಇವರಿಗೆ ಬುದ್ಧಿ ಕಲಿಸುತ್ತಾರೆ. ಮುಂದೆ ನೋಡೋಣ ಹಿಂದೂ ಜನರ ವೋಟ್ ಇಲ್ಲದೆ ಹೇಗೆ ಗೆಲ್ಲುತ್ತಾರೆ ಅಂತ. ಬರೀ ಮುಸಲ್ಮಾನರ ಮತ ಪಡೆದು ಗೆಲ್ಲುತ್ತಾರಾ ನೋಡೋಣ. ಸ್ಮಶಾನದಲ್ಲಿ ಮಲಗಿರೋರು ಎದ್ದು ಬಂದು ಮತ ಹಾಕ್ತಾರಾ ನೋಡೋಣ? ಜೀವಂತ ಜನರಿಗೆ ಸಹಾಯ ಮಾಡಲಿ. ಸತ್ತವರಿಗೆ ಹೋಗಿ ಏನು ಮಾಡ್ತಾರೆ ಎಂದು ಯತ್ನಾಳ್ ವ್ಯಂಗ್ಯವಾಡಿದರು.
ವಿಜಯಪುರ ಮಹಾನಗರ ಪಾಲಿಕೆಯಲ್ಲಿನ ಗೆಲುವು ಅಭಿವೃದ್ಧಿಯ ಗೆಲುವು, ಹಿಂದುತ್ವದ ಗೆಲುವು, ಬಿಜೆಪಿಯ ಗೆಲುವು. ಬೊಮ್ಮಾಯಿ ಕೂಡ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಜನ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.
ಇಂಡಿಯಾ, ಇಂಗ್ಲೆಂದ್ ಕ್ರಿಕೆಟ್ ಮ್ಯಾಚ್ ವಿಚಾರ ಕುರಿತು ಮಾತನಾಡಿದ ಯತ್ನಾಳ್, ನಾನು ಸಿನಿಮಾ ನೋಡಲ್ಲ, ಕ್ರಿಕೆಟ್ ನೋಡಲ್ಲ. ಸಿನಿಮಾ, ಕ್ರಿಕೆಟ್ ನವರು ನನಗೆ ಹಿರೋಗಳಲ್ಲ, ನನಗೆ ಹೀರೋಗಳು ನಮ್ಮದೇಶದ ಸೈನಿಕರು, ನಮ್ಮ ಪೊಲೀಸರು, ಸ್ವಾತಂತ್ರ್ಯ ಹೋರಾಟಗಾರರು. ಇವರೇ ನನಗೆ ಹಿರೋಗಳೇ ಹೊರತು ಬೇರೆಯವರಲ್ಲ ಎಂದರು.
ಇದನ್ನೂ ಓದಿ: ಪ್ರತಿ ತಿಂಗಳು ಮೋದಿ ಬರಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಚಳವಳಿ..