ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಬಿಜೆಪಿಯ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಉಪ ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಸಂಪರ್ಕಿಸಿ ಮನವಿ ಮಾಡಿದ್ದಾರೆ ಎಂಬ ಎಕ್ಸ್ಕ್ಲೂಸಿವ್ ಮಾಹಿತಿ " ಈ ಟಿವಿ ಭಾರತಕ್ಕೆ " ಲಭ್ಯವಾಗಿದೆ.
ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ , ಲಕ್ಷ್ಮಣ ಸವದಿ , ವಸತಿ ಸಚಿವ ವಿ.ಸೋಮಣ್ಣ ಸೇರಿದಂತೆ ಬಿಜೆಪಿಯ ಶಾಸಕರು ಮತ್ತು ಸಚಿವರನ್ನು ಸಂಪರ್ಕಿಸಿ ಯತ್ನಾಳ್ ಬೆಂಬಲ ಕೋರುತ್ತಿದ್ದಾರೆ. ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ಅದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಸರ್ಕಾರವಾಗಿದೆ. ಈ ಸರ್ಕಾರದಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ. ಸಚಿವರಿಗೂ ಸಹ ಮನ್ನಣೆ ಇಲ್ಲ, ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪಗಳನ್ನು ಸಿಎಂ ವಿರುದ್ಧ ಯತ್ನಾಳ್ ಮಾಡಿದ್ದಾರೆ ಎನ್ನಲಾಗಿದೆ.
ಯತ್ನಾಳ್, ಸಚಿವರು ಮತ್ತು ಶಾಸಕರನ್ನು ಸಂಪರ್ಕಿಸಿ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಕೆಲವು ಆಪ್ತರು ಮುಖ್ಯಮಂತ್ರಿ ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ. ಸಿಎಂ ಬಿಎಸ್ವೈ ಯತ್ನಾಳ್ ಬಂಡಾಯವನ್ನು ಗಂಭೀರವಾಗಿ ತಗೆದುಕೊಂಡಿದ್ದು, ಖುದ್ದಾಗಿ ಮಾತನಾಡಿ ಮನಸ್ತಾಪ ಸರಿಪಡಿಸಲು ಪ್ರಯತ್ನ ನಡೆಸಿದ್ದಾರೆ. ಸಂಧಾನದ ಮಾತುಕತೆಗೆ ಹಲವು ಬಾರಿ ಆಹ್ವಾನ ನೀಡಿದರೂ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೆ ಸಿಗದೇ ಓಡಾಡುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಕೆಲವು ಹಿರಿಯ ಸಚಿವರು ಸಿಎಂ ಯಡಿಯೂರಪ್ಪ ಮತ್ತು ಯತ್ನಾಳ್ ನಡುವೆ ಮಾತುಕತೆಗೆ ಸಮಯ ನಿಗದಿ ಮಾಡಿದ್ದರೂ ಸಹ ಯತ್ನಾಳ್ ಸಿಎಂ ಬಳಿ ಮಾತುಕತೆಗೆ ಹೋಗಲು ಸಬೂಬು ಹೇಳುತ್ತಿದ್ದಾರೆಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ. ಇತ್ತೀಚಿನ ದಿನಗಳವರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನಾಯಕರೆಂದು ಹೇಳುತ್ತಿದ್ದ ಬಸನಗೌಡ ಯತ್ನಾಳ್ ಈಗ ತಮ್ಮ ವರಸೆ ಬದಲಾಯಿಸಿ ಯಡಿಯೂರಪ್ಪ ಸಿಎಂ ಅಷ್ಟೆ, ತಮ್ಮ ನಾಯಕರಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಾತ್ರ ತಮ್ಮ ನಾಯಕರೆಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಇದು ಯತ್ನಾಳ್ ಸಿಎಂ ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿರುವುದನ್ನು ಮತ್ತಷ್ಟು ಖಚಿತಪಡಿಸಿದೆ.