ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕಾರಣ, ಕುಟುಂಬದ ಹಿಡಿತ, ಬ್ಲ್ಯಾಕ್ಮೇಲ್ ರಾಜಕಾರಣವನ್ನೆಲ್ಲಾ ಹೈಕಮಾಂಡ್ ಪ್ರತಿನಿಧಿಗಳ ಮುಂದೆ ಬಯಲು ಮಾಡಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ನಾನು ಧೈರ್ಯವಾಗಿ ಇರುವ ಸತ್ಯವನ್ನೇ ಹೇಳುತ್ತೇನೆ. ಪ್ರತಿಪಕ್ಷ ನಾಯಕನ ಸ್ಥಾನವನ್ನು ಉತ್ತರ ಕರ್ನಾಟಕ ಭಾಗಕ್ಕೆ ಕೊಡುವಂತೆ ಕೇಳುತ್ತೇನೆ. ಒಂದು ವೇಳೆ ಉತ್ತರ ಕರ್ನಾಟಕಕ್ಕೆ ಅವಕಾಶ ನೀಡದಿದ್ದಲ್ಲಿ ಜನರು ಮುಂದೆ ಉತ್ತರ ನೀಡಲಿದ್ದಾರೆ. ನಾನೂ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಹೈಕಮಾಂಡ್ ವೀಕ್ಷಕರ ಜೊತೆಗಿನ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಯಾರು ಯಾರು ಹೊಂದಾಣಿಕೆ ಮಾಡಿಕೊಂಡಿದ್ದರು. ಯಾರು ಯಾರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪಕ್ಷವನ್ನು ಯಾವ ರೀತಿ ಒಂದು ವರ್ಗದ ಕೇಂದ್ರೀಕೃತವಾಗಿ ಮಾಡಲಾಗಿದೆ ಎಂದು ಬಹಳ ವಿವರವಾಗಿ ಮನದಟ್ಟಾಗುವಂತೆ ಹೈಕಮಾಂಡ್ ಪ್ರತಿನಿಧಿಗಳಿಗೆ ಹೇಳಿದ್ದೇನೆ. ರಾಜಕಾರಣದಲ್ಲಿ ನ್ಯಾಯ ನೀತಿ ಇರುವುದರಿಂದ ಕರ್ನಾಟಕದಲ್ಲಿ ಏನು ನಡೆದಿದೆ.
ಕರ್ನಾಟಕದಲ್ಲಿ ಒಂದು ಕುಟುಂಬದ ಪಕ್ಷವಾಗಬಾರದು. ಇದಕ್ಕೆ ನಾವು ಒಪ್ಪುವುದಿಲ್ಲ. ಬಿಜೆಪಿಯ ಹಿಂದೂಪರ ಕಾರ್ಯಕರ್ತರು ಒಪ್ಪಲ್ಲ. ಕೆಲವೇ ಚೇಲಾಗಳ ಮಾತು ಕೇಳಿ ಪಕ್ಷ ಈ ರೀತಿ ಕ್ರಮ ತೆಗೆದುಕೊಳ್ಳಬಾರದು. ಬ್ಲ್ಯಾಕ್ಮೇಲ್ ಮಾಡುವಂತವರಿಗೆ ನಾವೆಲ್ಲೂ ಕೇರ್ ಮಾಡಲ್ಲ. ಕೆಲವೊಬ್ಬರು ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಗಟ್ಟಿತನದಲ್ಲಿ ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ. ಇಡೀ ರಾಜ್ಯದ ಹೊಂದಾಣಿಕೆ ಹೇಳಿ ಇವರೆಲ್ಲರ ಬಣ್ಣ ಬಯಲು ಮಾಡಿದ್ದೇನೆ. ಸತ್ಯವಾಗಿ ಮಾತನಾಡಿದ್ದೇನೆ ಎಂದರು.
ವಿಜಯೇಂದ್ರ - ಬಿಎಸ್ವೈ ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಯಡಿಯೂರಪ್ಪ ಮತ್ತು ವಿಜಯೇಂದ್ರ ಕುರಿತು ನಾನು ಪ್ರತಿಕ್ರಿಯೆ ಕೊಡಲ್ಲ. ಆದರೆ ಸಂಜೆ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ನಾನು ನನ್ನ ಅಭಿಪ್ರಾಯ ಮುಂದಿಡುತ್ತೇನೆ. ನಾನು ಯಾರಿಗೂ ಅಂಜುವುದಿಲ್ಲ. ನಾನು ಯಾರ ಮುಲಾಜಿನಲ್ಲಿಯೂ ಇಲ್ಲ. ಯತ್ನಾಳ್ ಅವರನ್ನು ಖರೀದಿ ಮಾಡಲು ಆಗಲ್ಲ. ನಿನ್ನೆ ಖರೀದಿಗೆ ಒಬ್ಬ ಏಜೆಂಟ್ ಬಂದಿದ್ದ, ಅವನಿಗೆ ನಿನ್ನಂತ 10 ಜನರನ್ನು ಖರೀದಿಸುವ ಶಕ್ತಿ ನನಗಿದೆ ಎಂದು ಹೇಳಿ ಕಳುಹಿಸಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನ ಬ್ಲ್ಯಾಕ್ಮೇಲ್ ರೀತಿಯಾಗಿದೆ. ಪ್ರಮಾಣಿಕ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರು ಕೊಲೆಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ.
ಇದಕ್ಕೆಲ್ಲಾ ಇವರ ಒಳ ಒಪ್ಪಂದ ಕಾರಣ. ಡಿಜಿ ಹಳ್ಳಿ ಕೆಜಿ ಹಳ್ಳಿ ಘಟನೆಯಾದಾಗ ಕತ್ತೆ ಕಾದರಾ? ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಅಲ್ಲಿ ಸರ್ಕಾರ ಏನು ಮಾಡಿತು? ಹುಬ್ಬಳ್ಳಿ ಘಟನೆ ಆಯಿತಲ್ಲ ಆಗೆಲ್ಲಾ ಯಾರ ಸರ್ಕಾರ ಇತ್ತು. ಬಿಜೆಪಿ ಸರ್ಕಾರವೇ ಅಲ್ಲವಾ? ಆಗಲೇ ಒಂದೆರಡು ಎನ್ಕೌಂಟರ್ ಮಾಡಿದ್ದರೆ ಇದೆಲ್ಲಾ ಸರಿಯಾಗುತ್ತಿರಲಿಲ್ಲವೇ? ಯಾಕೆ ಈ ಬಾರಿಯ ವಿದಾನಸಭಾ ಚುನಾವಣೆಯಲ್ಲಿ 66 ಸ್ಥಾನಕ್ಕೆ ಬರುತ್ತಿತ್ತು. ಸರಿಯಾಗಿ ಇರುತ್ತಿದ್ದರೆ 130 ಸ್ಥಾನ ದಾಟುತ್ತಿತ್ತಲ್ಲವೇ ಎಂದು ರಾಜ್ಯ ಬಿಜೆಪಿ ನಾಯಕರ ಧೋರಣೆಯನ್ನು ಕಟುವಾಗಿ ಟೀಕಿಸಿದರು.
ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡಬೇಕು ಇದರಲ್ಲಿ ರಾಜಿ ಇಲ್ಲ. ಯಾಕೆ ಕೊಡಲ್ಲ, ಎಲ್ಲ ದಕ್ಷಿಣ ಕರ್ನಾಟಕದವರೇ ಆಗಬೇಕಾ? ಮಂಗಳೂರು ಬಿಟ್ಟರೆ ಬೇರೆ ಜಿಲ್ಲೆಯಲ್ಲಿ ಬಿಜೆಪಿ ಸ್ಥಾನ ಎಷ್ಟು ಇದೆ. ಉತ್ತರ ಕರ್ನಾಟಕದಲ್ಲಿ ಬೀದರ್ನಿಂದ ರಾಯಚೂರಿನವರೆಗೂ ಬಿಜೆಪಿ ಇದೆ. ಹಾಗಾಗಿ ನಮ್ಮ ಭಾಗಕ್ಕೆ ಅವಕಾಶ ಕೊಡಬೇಕು. ಒಂದು ವೇಳೆ ಕೊಡದೇ ಇದ್ದರೆ ಜನ ನಿರ್ಣಯ ಮಾಡಲಿದ್ದಾರೆ. ನಾವು ನಿರ್ಣಯ ಮಾಡಲಿದ್ದೇವೆ. ಬಹಳ ಜನ ಶಾಸಕರು ನಮ್ಮ ಜೊತೆ ಇದ್ದಾರೆ. ಆದರೆ ಅವರಿಗೆ ದನಿ ಇಲ್ಲ. ತಮ್ಮ ಮಕ್ಕಳನ್ನು ಸಂಸದರನ್ನಾಗಿ ಮಾಡಲು ವಿಜಯೇಂದ್ರಗೆ ಜೈ ಎನ್ನುತ್ತಿದ್ದಾರಷ್ಟೆ ಎಂದರು.
ನಾನು ಯಾರು ಗೌರವಿಸುತ್ತಾರೋ ಅವರ ಜೊತೆ ಮಾತನಾಡುತ್ತೇನೆ. ಕೆಲಸ ಇದ್ದಾಗ ಯಡಿಯೂರಪ್ಪ ಸಂಪರ್ಕ ಮಾಡುತ್ತಾರೆ. ಮುಂದೆ ತುಳಿಯುವಾಗಲೂ ಸಂಪರ್ಕ ಮಾಡುತ್ತಾರೆ. ಆದರೆ ನನಗೆ ಯಾರ ಭಯವೂ ಇಲ್ಲ. ಪಕ್ಷ ಉಳಿಯಬೇಕು, ದೇಶ ಉಳಿಯಬೇಕು, ಮೋದಿ ಪ್ರಧಾನಿಯಾಗಬೇಕು ಅಷ್ಟೇ. ನನಗೆ ಯಾವುದೇ ಹುದ್ದೆ ಬೇಡ. ಅವರು ಇಂದು ನನ್ನಂತಹ ಬಡಪಾಯಿ ಮನೆಗೆ ಬಂದರು. ಯಡಿಯೂರಪ್ಪ ಮನೆಗೆ ಹೋಗಿದ್ದರೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಆದರೆ ಅದನ್ನು ಬಿಟ್ಟು ನನ್ನ ಮನೆಗೆ ಬಂದಿದ್ದಾರೆ. ಅದಕ್ಕಾಗಿ ಸಂತೋಷವಾಗಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಲ್ಲ ಅವರಿಂದ ನನಗೇನೂ ಆಗಬೇಕಿಲ್ಲ. ನನಗೆ ಹಿಂದು ಮತ್ತು ಉತ್ತರ ಕರ್ನಾಟಕ ಮುಖ್ಯ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದರೆ ಜನರು ಆದಷ್ಟು ಬೇಗ ಉತ್ತರ ಕೊಡಲಿದ್ದಾರೆ ಎಂದರು.
ನಾವು ಪ್ರಾದೇಶಿಕ ಸಮಾನತೆಗೆ ಬೇಡಿಕೆ ಇಡುತ್ತೇವೆ. ಎಲ್ಲಾ ಈ ಕಡೆಯವರಾದರೆ ನಾವೇನು ಸರ್ ಸರ್ ಅಂತಾ ಅವರ ಮನೆ ಮುಂದೆ ಹೋಗಬೇಕಾ? ಅವರು ಮೇಲೆ ಕುಳಿತಿರುತ್ತಾರೆ, ನಾವು ಅವರನ್ನು ಕಾಯಬೇಕಾ? ಉತ್ತರ ಕರ್ನಾಟಕದಿಂದ ನಾವು ಇವರನ್ನು ಸಿಎಂ ಮಾಡಬೇಕಾ? ಬೊಮ್ಮಾಯಿ ಕೂಡ ನಮ್ಮ ಬೇಡಿಕೆಗೆ ಸಹಕರಿಸಲಿದ್ದಾರೆ. ನಾವೆಲ್ಲಾ ಒಟ್ಟಾಗಿದ್ದೇವೆ. ಇಲ್ಲಿ ಜಾತಿ ಇಲ್ಲ. ಎಲ್ಲ ಮಂಡ್ಯ ಮೈಸೂರಿನವರೇ ಆಗಬೇಕಾ? ನಮ್ಮ ಭಾಗಕ್ಕೂ ಪ್ರತಿಪಕ್ಷ ಸ್ಥಾನ ಬೇಕೇಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಬಿಎಸ್ವೈ, ಬೊಮ್ಮಾಯಿ, ಯತ್ನಾಳ್ ಜೊತೆ ಹೈಕಮಾಂಡ್ ವೀಕ್ಷಕರ ಚರ್ಚೆ