ಬೆಂಗಳೂರು: ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್ ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಷ್ಟು ಅಬ್ಬರ ಇಲ್ಲದೆ ಅಭ್ಯರ್ಥಿ ನಾಗರಾಜ್ ಹೇರೋಹಳ್ಳಿ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಂ.ಕೃಷ್ಣಪ್ಪ, ರಾಜ್ಕುಮಾರ್ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಭ್ಯರ್ಥಿ ನಾಗರಾಜ್, ಲಕ್ಷ ಮತಗಳಿಂದ ಗೆಲ್ಲುತ್ತೇನೆ ಎಂಬ ಹೇಳಿಕೆಯನ್ನು ಸೋಮಶೇಖರ್ ಪ್ರತಿ ಬಾರಿ ಹೇಳುತ್ತಾರೆ. ಆದರೆ, ಕಳೆದ ಬಾರಿಯ ಗೆಲುವು ಸೋಮಶೇಖರ್ ಅವರಿಗೆ ಎಷ್ಟು ಕಷ್ಟ ಆಯಿತು ಅಂತ ನಾವು ನೋಡಿದ್ದೇವೆ ಎಂದರು.
ಇದೇ ವೇಳೆ ಮತನಾಡಿದ ಶಾಸಕ ಎಂ.ಕೃಷ್ಣಪ್ಪ, ಎಸ್.ಟಿ.ಸೋಮಶೇಖರ್ ಹೆಸರಿಗೆ ಗೌಡ ಸೇರ್ಪಡೆಗೊಳಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಜಾತಿ ಆಧಾರ ಏಕೆ ತಗೋತಾರೆ ಗೊತ್ತಿಲ್ಲ. ನಾವು ಯಾವುದೇ ಭೇದ ಭಾವ ಇಲ್ಲದೇ ಅಭಿವೃದ್ಧಿ ಮಾಡುತ್ತೇವೆ ಎಂದರು.
ಬಳಿಕ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಯಶವಂತಪುರ ಕ್ಷೇತ್ರದ ಅಭ್ಯರ್ಥಿಯಾಗಿ ನಾಗರಾಜ್ ಈ ಭಾಗದ ಜನರ ವಿಶ್ವಾಸ ಗಳಿಸಿದ್ದಾರೆ. ಜನರು ಇವರಿಗೆ ಆಶೀರ್ವಾದ ಮಾಡುವ ವಿಶ್ವಾಸ ಇದೆ ಎಂದರು.