ಬೆಂಗಳೂರು: ಹೊರದೇಶದಿಂದ ಬಂದ ಕುಟುಂಬಕ್ಕೆ ಮಾತ್ರ ಕೊರೊನಾ ಸೋಂಕು ಬಾಧಿಸಿದ್ದು, ರಾಜ್ಯದಲ್ಲಿ ವಾಸ ಮಾಡುವ ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ ಯಾರೂ ಆತಂಕಪಡಬೇಕಿಲ್ಲ. ಜೊತೆಗೆ ಮಾಸ್ಕ್ ಧರಿಸುವ ಅಗತ್ಯವೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಅಧಿಕಾರಿಗಳ ಜೊತೆಗಿನ ಸಭೆಯ ನಂತರ ಸುದ್ದಿಗೊಷ್ಚಿಯಲ್ಲಿ ಮಾತನಾಡಿದ ಸಿಎಂ, ಅಮೆರಿಕದಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು ಅವರ ಪತ್ನಿ, ಪುತ್ರಿ ಹಾಗು ಸ್ನೇಹಿತರೊಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅದನ್ನು ಹೊರತುಪಡಿಸಿ ಮತ್ತೆ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಈಗಾಗಲೇ ಆ ಕುಟುಂಬವಿದ್ದ ಅಪಾರ್ಟ್ಮೆಂಟ್ ನಲ್ಲಿನ 165 ಜನರ ತಪಾಸಣೆ ಮಾಡಲಾಗಿದೆ. ಅವರಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಂಕು ತಡೆಗೆ ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳು:
ಬೆಂಗಳೂರಿನಲ್ಲಿ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆ ಹಾಗು ಎಲ್ಲಾ ಜಿಲ್ಲೆಗಳಲ್ಲಿ ಡಿಸಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚನೆ ಮಾಡಲಾಗಿದೆ. ಒಂದು ವೇಳೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ, ಚಿಕಿತ್ಸೆಗಾಗಿ ಬಿಎಸ್ಎಫ್ ಆಸ್ಪತ್ರೆಯಲ್ಲಿ 300 ಹಾಸಿಗೆ ಇರುವ ಆರ್ಮಿ ಆಸ್ಪತ್ರೆಯಲ್ಲಿ ಹೆಚ್ಚುವರಿ 150 ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಹೊರದೇಶಗಳಿಂದ ಬಂದ ಎಲ್ಲರನ್ನೂ ತಪಾಸಣೆ ಮಾಡಲು ಸೂಚಿಸಲಾಗಿದೆ. ಬೆಂಗಳೂರು, ಮಂಗಳೂರು, ಕಾರವಾರ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ 95 ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ ಎಂದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ 5ನೇ ತರಗತಿವರೆಗೆ ಶಾಲೆಗೆ ರಜೆ ಘೊಷಣೆ ಮಾಡಲಾಗಿದೆ. ಪ್ರತಿ ದಿನ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಸ್ಥಿತಿ ಅವಲೊಕನ ಮಾಡುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೊಲೇಷನ್ ವಾರ್ಡ್ ರಚನೆ ಮಾಡಿದ್ದು ಮೈಸೂರು, ಶಿವಮೊಗ್ಗದಲ್ಲಿ ಸೋಂಕು ಪರೀಕ್ಷೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮಾಸ್ಕ್ ಧರಿಸುವ ಅಗತ್ಯವಿಲ್ಲ:
ಯಾರೂ ಕೂಡ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಅದು ಫ್ಯಾಷನ್ ಆಗಬಾರದು ನಮ್ಮ ಕಡೆಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಅನುಸರಿಸುತ್ತೇವೆ. ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸುತ್ತಿದ್ದೇವೆ. ಚೀನಾ ಸೇರಿ ಬಾಧಿತ ದೇಶಗಳಿಂದ ಬಂದವರು ವೈದ್ಯರಿಂದ ಅಗತ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗದ ಲಕ್ಷಣ ಕಂಡರೆ ವೈದ್ಯಕೀಯ ನೆರವು ಪಡೆಯಬೇಕು ಎಂದು ಮನವಿ ಮಾಡಿದರು.