ಬೆಂಗಳೂರು:ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ರಾಜಕೀಯ ಬೆಳವಣಿಗಳ ಬಗ್ಗೆ ಸದ್ಯದಲ್ಲೇ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಹಾಗೂ ಅಮಿತ್ ಶಾ ಅವರಿಗೆ ಮಾಹಿತಿ ನೀಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದಿನ ರಾಜಕೀಯ ಬೆಳವಣಿಗೆ ಹಿನ್ನೆಲೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಾಳೆಗೆ ಮುಂದೂಡಿದ ಯಡಿಯೂರಪ್ಪ ಕಚೇರಿಗೆ ಆಗಮಿಸಿದ್ದ ಶಾಸಕರನ್ನು ವಿಧಾನಸೌಧಕ್ಕೆ ಕಳುಹಿಸಿಕೊಟ್ಟರು. ನಂತರ ಬಿಜೆಪಿ ಪ್ರಮುಖ ನಾಯಕರ ಸಭೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀದರ್ ರಾವ್, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿ ಪ್ರಮುಖ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ,ಕಾಂಗ್ರೆಸ್-ಜೆಡಿಎಸ್ ನಾಯಕರು ಕೊನೆಯ ಹಂತಕ್ಕೆ ಬಂದಿದ್ದಾರೆ. ಏನಾಗಲಿದೆ ಎಂದು ಕಾದು ನೋಡುತ್ತೇವೆ. ಶುಕ್ರವಾರ ಅಧಿವೇಶನ ಇದೆ ನಾಳೆ ಮತ್ತೆ ಶಾಸಕಾಂಗ ಸಭೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಇವತ್ತು ಸ್ಪೀಕರ್ ಜೊತೆ ಒಂದು ಗಂಟೆ ಕುಳಿತು ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ್ದೇವೆ. ರಾಜೀನಾಮೆ ಒಪ್ಪಿಕೊಳ್ಳದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಒಪ್ಪಿಕೊಳ್ಳಿ ಎಂದು ತಿಳಿಸಿದ್ದೇವೆ. ಅವರು ಏನು ಮಾಡುತ್ತಾರೆ ನೋಡೋಣ. ಸುಪ್ರೀಂಕೋರ್ಟ್ನಲ್ಲಿ ನಾಳೆ ಅರ್ಜಿ ವಿಚಾರಣೆ ಆಗಲಿದ್ದು, ನಿರ್ಧಾರ ಆಗಬಹುದು ನಂತರ ಏನು ಮಾಡಬೇಕು ಎಂದು ನೋಡುತ್ತೇವೆ ಎಂದರು.