ಬೆಂಗಳೂರು: ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಬಿಜೆಪಿ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ ನೇಮಕಗೊಂಡಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಘೋಷಿಸಿದರು.
ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಸಂದರ್ಭ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡುತ್ತಿದ್ದ ಸಂದರ್ಭ ಅವರನ್ನು ತಡೆದ ಸಭಾಪತಿಗಳು, ಸರ್ಕಾರದ ನೂತನ ಆದೇಶವನ್ನು ಪ್ರಕಟಿಸಿದರು.
ಮರಿತಿಬ್ಬೇಗೌಡು ಮಾತನಾಡುತ್ತಿರುವಾಗಲೇ ಕಾಕತಾಳೀಯವಾಗಿ ಈ ಆದೇಶ ನನ್ನ ಕೈಸೇರಿದೆ. ನಿಮ್ಮ ಆತ್ಮೀಯ ಸ್ನೇಹಿತರಿಗೆ ಶುಭ ಸುದ್ದಿ ಬಂದಿದೆ ಎಂದು ಪ್ರಕಟಣೆ ಓದಿದರು. ಎದ್ದು ನಿಂತು ಕೈ ಮುಗಿದ ನಾರಾಯಣಸ್ವಾಮಿಗೆ ಸಭಾಪತಿಗಳು ಶುಭಾಶಯ ಸಲ್ಲಿಸಿದರು.
ಆಡಳಿತ ಪಕ್ಷ ಸದಸ್ಯರು ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದರು. ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಪ್ರತಿಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದರು. ಮರಿತಿಬ್ಬೇಗೌಡ ಮಾತನಾಡಿ, ನನಗೆ ತುಂಬಾ ಸಂತೋಷವಾಗಿದೆ, ಅಭಿನಂದಿಸುತ್ತೇನೆ ಎಂದರು.
ಸಭಾಪತಿಗಳು ಮಾತನಾಡಿ, ನಾರಾಯಣಸ್ವಾಮಿ ಮುಂದಿನ ಸೀಟಿಗೆ ಬನ್ನಿ. ಇನ್ನಾದರೂ ಅತ್ತಿತ್ತ ಓಡಾಡುವುದನ್ನು ಕಡಿಮೆ ಮಾಡಿ. ಒಂದು ಕಡೆ ಕೂತುಕೊಳ್ಳುವುದನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಳೆದ ಡಿಸೆಂಬರ್ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಗೆ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ, ಅಂದು ಸರ್ಕಾರದ ಮುಖ್ಯ ಸಚೇತಕರಾಗಿದ್ದ ಮಹಾಂತೇಶ್ ಕವಟಗಿಮಠ ಸೋತ ಹಿನ್ನೆಲೆ ಸ್ಥಾನ ತೆರವಾಗಿತ್ತು. ಬಜೆಟ್ ಅಧಿವೇಶನ ಆರಂಭವಾದ ಒಂದುವಾರದ ಎರಡು ದಿನ ಬಳಿಕ ಸರ್ಕಾರದಿಂದ ಈ ನೇಮಕ ಆಗಿದೆ. ಉಪಸಭಾಪತಿಗಳ ಆಯ್ಕೆ ಮಾಡಬೇಕಾಗಿರುವುದು ಬಾಕಿ ಇದೆ.