ಬೆಂಗಳೂರು: ಪ್ರತಿ ವರ್ಷ ಜನವರಿ 24ರಂದು ದೇಶಾದ್ಯಂತ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಆಚರಣೆಯಿಂದ ಸಮಾಜದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಎಲ್ಲ ಅಸಮಾನತೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಉದ್ದೇಶ ಹೊಂದಲಾಗಿದೆ.
ಹೆಣ್ಣು ಮಗುವಿನ ಬಗ್ಗೆ ಶಿಕ್ಷಣದ ಅಸಮಾನತೆ, ಪೋಷಣೆ, ಕಾನೂನು ಹಕ್ಕುಗಳು, ವೈದ್ಯಕೀಯ ಆರೈಕೆ, ರಕ್ಷಣೆ, ಗೌರವ, ಬಾಲ್ಯ ವಿವಾಹ ಮತ್ತು ಅನೇಕ ಕ್ಷೇತ್ರಗಳನ್ನೊಳಗೊಂಡಿರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನವು ಈ ಎಲ್ಲ ಸಮಸ್ಯೆಗಳನ್ನು ಎತ್ತಿ ಹಿಡಿಯುವುದು ಹಾಗೂ ಹೆಣ್ಣು ಮಕ್ಕಳ ಹಕ್ಕು ಮತ್ತು ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು. ಹೆಣ್ಣು ಮಕ್ಕಳ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ, ಪಿಸಿ&ಪಿಎನ್ಡಿಟಿ ಕಾಯ್ದೆ ಒಂದು ಬೆಂಬಲ ಚಟುವಟಿಕೆಯಾಗಿದೆ.ಈ ಕಾಯ್ದೆಯನ್ನು 1994 ರಲ್ಲಿ ಜಾರಿಗೆ ತರಲಾಯಿತು.
ಓದಿ: ತೃತೀಯ ಲಿಂಗಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಗೃಹ ಸಚಿವಾಲಯ ನಿರ್ದೇಶನ
ಈ ಕಾಯ್ದೆಯಡಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡದಂತೆ ತಡೆಗಟ್ಟುವುದು ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತವು 2001ರಲ್ಲಿ 946ರಷ್ಟಿದ್ದು, 2011ಕ್ಕೆ 948ಕ್ಕೆ ಏರಿಕೆಯಾಗಿದೆ. ಅದರಂತೆ ಸಿವಿಲ್ ರಿಜಿಸ್ಟರೇಷನ್ ಸಿಸ್ಟಮ್ 2018ರಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ 957ಕ್ಕೆ ಏರಿಕೆಯಾಗಿರುತ್ತದೆ. ಪಿಸಿ&ಪಿಎನ್ಡಿಟಿ ಕಾಯ್ದೆಯಡಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು ಮತ್ತು ಹೆಣ್ಣು ಮಕ್ಕಳ ಲಿಂಗಾನುಪಾತವು ಹೆಚ್ಚಿಸಲು ರಾಜ್ಯ ಮಟ್ಟದಲ್ಲಿ ರಾಜ್ಯ ಮೇಲ್ವಿಚಾರಣಾ ಮಂಡಳಿ (ಕಾಯ್ದೆಯ ಸೆಕ್ಷನ್ 16-ಎರಂತೆ), ರಾಜ್ಯ ಸಕ್ಷಮ ಪ್ರಾಧಿಕಾರ, ರಾಜ್ಯ ಸಲಹಾ ಮಂಡಳಿ (ಕಾಯ್ದೆಯ ಸೆಕ್ಷನ್ 17 ರಂತೆ) ಹಾಗೂ ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಕ್ಷಮ ಪ್ರಾಧಿಕಾರಿ ಜಿಲ್ಲಾಧಿಕಾರಿಗಳಾಗಿದ್ದು, ಜಿಲ್ಲಾ ಸಲಹಾ ಮಂಡಳಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ, ಕಾಲಾನುಕಾಲಕ್ಕೆ ಸಭೆಗಳು ಮತ್ತು ಸ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಡೆಸಲಾಗುತ್ತಿದೆ.
ಪಿಸಿ&ಪಿಎನ್ಡಿಟಿ ಕಾಯ್ದೆಯನ್ನು ಉಲ್ಲಂಘಿಸಿರುವ 84 ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಅದರಲ್ಲಿ 41 ಪ್ರಕರಣಗಳು ಮುಕ್ತಾಯಗೊಂಡಿದ್ದು, ಉಳಿದ 43 ಪ್ರಕರಣಗಳು ನ್ಯಾಯಾಲಯದ ವಿವಿಧ ಹಂತದಲ್ಲಿ ಬಾಕಿಯಿದೆ.