ಬೆಂಗಳೂರು: ಸದ್ಯ ಸರ್ಕಾರದ ಮೊದಲ ಆದ್ಯತೆ ಏನಿದ್ದರೂ ಕೋವಿಡ್ 19 ನಿಯಂತ್ರಣ. ಇಡೀ ಆಡಳಿತ ಯಂತ್ರ ಕೊರೊನಾ ಮಟ್ಟಹಾಕಲು ಹಗಲಿರುಳು ಬೆವರಿಳಿಸುತ್ತಿದೆ. ಈ ಕೋವಿಡ್ ಮಹಾಮಾರಿಯಿಂದ ಸರ್ಕಾರಿ ಕಚೇರಿಗಳಲ್ಲಿನ ಕೆಲಸಗಳಿಗೆ ಹಿನ್ನಡೆಯಾಗಿದ್ದು, ಇನ್ನು ಮುಂದೆ ಸಾರ್ವಜನಿಕರ ಅರ್ಜಿ ವಿಲೇವಾರಿ ಬಹುತೇಕ ಸ್ತಬ್ಧವಾಗಲಿದೆ.
ಕೋವಿಡ್ 19 ವಕ್ಕರಿಸಿದ ಬಳಿಕ ರಾಜ್ಯದ ಆಡಳಿತ ಯಂತ್ರ ಮಹಾಮಾರಿಯ ನಿಯಂತ್ರಣದತ್ತಲೇ ಸಂಪೂರ್ಣವಾಗಿ ಗಮನಹರಿಸಿದೆ. ಬಹುತೇಕ ಸರ್ಕಾರಿ ನೌಕರರನ್ನು ಕೊರೊನಾ ನಿಯಂತ್ರಣದ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗಾಗಿ ನಿತ್ಯದ ಸರ್ಕಾರಿ ಕಚೇರಿಗಳಲ್ಲಿನ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿನ ಕೆಲಸ ಅಕ್ಷರಶ: ಸ್ಥಗಿತವಾಗಲಿದೆ.
75% ಸಿಬ್ಬಂದಿ ಕೋವಿಡ್ ಕರ್ತವ್ಯಕ್ಕೆ ನಿಯೋಜನೆ:
ಅಗತ್ಯ ಸೇವೆ ಪೂರೈಸುವ ಕೆಲ ಇಲಾಖೆಗಳನ್ನು ಬಿಟ್ಟು ಇತರ ಇಲಾಖೆಗಳ ಸುಮಾರು 40-50% ಸಿಬ್ಬಂದಿಯನ್ನು ಕೋವಿಡ್ 19 ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದರೆ ಇನ್ನು ಮುಂದೆ ಎಲ್ಲಾ ಇಲಾಖೆಗಳಲ್ಲಿನ ಸಿಬ್ಬಂದಿಯ 75%ರಷ್ಟು ಮಂದಿಯನ್ನು ಕೊರೊನಾ ನಿರ್ವಹಣೆಗೆ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಬೆಂಗಳೂರು, ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿರುವ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಸಿಬ್ಬಂದಿ ಕೋವಿಡ್ ನಿರ್ವಹಣೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಈ ಸಂಬಂಧ ಮಂಗಳವಾರದೊಳಗೆ ಎಲ್ಲ ಇಲಾಖೆಯ 75% ಸಿಬ್ಬಂದಿಯ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ.
ಸರ್ಕಾರಿ ಕಚೇರಿ ಕೆಲಸ ಇನ್ನಷ್ಟು ವಿಳಂಬ:
ಬಹುತೇಕ ಎಲ್ಲಾ ಇಲಾಖೆಯ 75% ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುತ್ತಿರುವುದರಿಂದ ಬೆಂಗಳೂರಲ್ಲಿ ಸರ್ಕಾರಿ ಕಚೇರಿ ಕೆಲಸ ಇನ್ನಷ್ಟು ವಿಳಂಬವಾಗಲಿದೆ. ಈಗಾಗಲೇ ಹಲವು ಸರ್ಕಾರಿ ಸೇವೆಗಳ ವಿಲೇವಾರಿ ಸಿಬ್ಬಂದಿ ಕೊರತೆಯಿಂದ ನಿಧಾನವಾಗಿದೆ. ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿನ ಆಡಳಿತ ಯಂತ್ರ ಅಕ್ಷರಶಃ ಸ್ಥಗಿತವಾಗಲಿದ್ದು, ಅರ್ಜಿ ವಿಲೇವಾರಿ ಮತ್ತಷ್ಟು ವಿಳಂಬವಾಗಲಿದೆ ಎಂದು ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.ಬಹುತೇಕ ಎಲ್ಲಾ ಕಚೇರಿಗಳಲ್ಲಿ ಕೇವಲ 25% ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಸಿಬ್ಬಂದಿ ಕೊರತೆ ಎದುರಾಗಲಿದೆ. ಹೀಗಾಗಿ ಸೀಮಿತ ಸಿಬ್ಬಂದಿಯಿಂದ ಸಾರ್ವಜನಿಕರ ಅರ್ಜಿ, ಕಡತ ವಿಲೇವಾರಿ ಮಾಡುವುದು ಕಷ್ಟಕರವಾಗಲಿದೆ. ಹಾಗಾಗಿ ಕಡತ ವಿಲೇವಾರಿ ಮಾಡುವುದು ಬಾಕಿ ಉಳಿದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಡತ ವಿಲೇವಾರಿ ವಿಳಂಬ ಹೇಗಿದೆ?:
ಸಾರ್ವಜನಿಕ ದೂರುಗಳ ನಿವಾರಣಾ ವ್ಯವಸ್ಥೆಯಡಿ ಇ-ಜನಸ್ಪಂದನದ ಮೂಲಕ ಸಲ್ಲಿಸಲಾದ ಅರ್ಜಿಗಳ ಪೈಕಿ ಅನೇಕ ಇಲಾಖೆಗಳಲ್ಲಿನ ಕಡತ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ.ಅದರಂತೆ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ವಿಲೇವಾರಿಯಾಗದೇ ಹಾಗೇ ಉಳಿದುಕೊಂಡಿದೆ. ಇನ್ನು ವಿಧಾನಸಭೆ ಸಚಿವಾಲಯದಲ್ಲಿ 92% ಅಂದರೆ ಸುಮಾರು 72 ಅರ್ಜಿಗಳು ವಿಲೇಯಾಗದೇ ಉಳಿದಿದೆ.ಇಲಾಖಾವಾರು ಅಂಕಿಅಂಶದಂತೆ ಸುಮಾರು 3,753 ಅರ್ಜಿಗಳು ತಿಂಗಳಾದರೂ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇನ್ನು ರಾಜ್ಯಾದ್ಯಂತ ಜಿಲ್ಲಾಡಳಿತಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗಳಿಗೆ ಸಂಬಂಧಿಸಿ 881, ಡಿಸಿ ಕಚೇರಿಗಳಲ್ಲಿ 2,967 ಹಾಗೂ ಸಿಇಒಗಳಿಗೆ ಸಂಬಂಧಿಸಿದ 3,081 ಅರ್ಜಿಗಳು ವಿಲೇವಾರಿಯಾಗಿಲ್ಲ. ಜಿಲ್ಲಾವಾರು ಜನತಾದರ್ಶನದಡಿ ಸುಮಾರು 11,367 ಅರ್ಜಿಗಳು ವಿಲೇವಾರುಯಾಗದೇ ಬಾಕಿ ಉಳಿದುಕೊಂಡಿದೆ.