ಬೆಂಗಳೂರು: ಕೆಂಗೇರಿ ಬಳಿ ವೃಷಭಾವತಿ ಕಾಲುವೆಗೆ ತಡೆಗೋಡೆ ನಿರ್ಮಿಸುವ ವೇಳೆ ಅವಘಡ ಸಂಭವಿಸಿದ್ದು, ಮಣ್ಣು ಕುಸಿದು ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಚಂಚಲ್ ಬುರ್ಮಾನ್ (21) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೆಂಗೇರಿ ಬಳಿ ವೃಷಭಾವತಿ ಕಾಲುವೆಗೆ ತಡೆಗೋಡೆ ನಿರ್ಮಾಣದ ಕೆಲಸ ನಡೆಯುತ್ತಿದ್ದು, ಕಾಮಗಾರಿಯಲ್ಲಿ ಚಂಚಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣ ಬಗ್ಗೆ ಈಟಿವಿ ಭಾರತಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ದೂರವಾಣಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. "ವಾಸ್ತು ಪ್ರಾಪರ್ಟಿಸ್ ಸಂಸ್ಥೆ ವೃಷಭಾವತಿ ಕಾಲುವೆಗೆ ಅವರ ಜಾಗದಲ್ಲೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದರು. ವಾಸ್ತು ಪ್ರಾಪರ್ಟಿಸ್ ಸಬ್ ಕಂಟ್ರಾಕ್ಟರ್ ಗಣೇಶ್ ಎಂಬಾತ ಗುತ್ತಿಗೆ ಪಡೆದಿದ್ದು, ಕಾರ್ಮಿಕರನ್ನು ಪಶ್ಚಿಮ ಬಂಗಾಳದಿಂದ ಕರೆದುಕೊಂಡು ಬಂದು ನಗರದಲ್ಲಿ ಕೆಲಸ ಮಾಡಿಸುತ್ತಿದ್ದ" ಎಂದಿದ್ದಾರೆ.
ಸದ್ಯ ಗಣೇಶ್ ವಿರುದ್ದ ಐಪಿಸಿ 304 ಎ ಅಡಿ ನಿರ್ಲಕ್ಷ್ಯತನದ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದೇವೆ ಎಂದರು.
ಇನ್ನು ಕೆಲಸಕ್ಕೆ ಬಂದಿದ್ದ ಚಂಚಲ್ ಗುಂಡಿ ಅಗೆಯುತ್ತಿದ್ದ. ಈ ವೇಳೆ ಏಕಾಏಕಿ ಚಂಚಲ್ ಮೇಲೆ ಮಣ್ಣು ಕುಸಿದಿದ್ದು, ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತನಿಖೆ ಹಂತದಲ್ಲಿ ಕಂಪನಿ ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪ್ರಕರಣದ ಬಗ್ಗೆ ವಿವರಣೆ ನೀಡಿದರು.
ಇಲ್ಲಿವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅತಿ ಶೀಘ್ರದಲ್ಲೇ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವುದಾಗಿ ಸಂಜೀವ್ ಪಾಟೀಲ್ ದೂರವಾಣಿ ಮುಖಾಂತರ ಮಾಹಿತಿ ನೀಡಿದರು.