ಬೆಂಗಳೂರು: ಭೀಕರ ಮಳೆಯ ನಡುವೆ ಮಹಿಳಾ ಕಾನ್ಸ್ಟೇಬಲ್ವೊಬ್ಬರು ಮಾಡಿದ ಸಾಹಸದ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಭಸದ ಮಳೆಗೆ ಬೆಂಗಳೂರು ದಕ್ಷಿಣ ಭಾಗ ಸೇರಿದಂತೆ ಬಹುತೇಕ ಕಡೆಗಳ ರಸ್ತೆಗಳು ನೀರಿನಿಂದ ಆವೃತಗೊಂಡಿದ್ದವು. ವರುಣನ ಅವಕೃಪೆಯಿಂದ ನಿನ್ನೆ ರಸ್ತೆ ಮಧ್ಯೆ ನೀರು ತುಂಬಿ ವಾಹನ ಸಂಚಾರ ದುಸ್ತರವೆನಿಸಿತ್ತು. ಕಿಲೋ ಮೀಟರಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿತ್ತು. ಇಂತಹ ಅನಾನುಕೂಲತೆ ಮಧ್ಯೆಯೂ ಕೆಂಗೇರಿ ಸಂಚಾರಿ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಪುಷ್ಟಾ ಮಾಡಿದ ಸಾಹಸದ ಕೆಲಸಕ್ಕೆ ಸಾರ್ವಜನಿಕರು ಶಹಬ್ಬಾಸ್ಗಿರಿ ನೀಡಿದ್ದಾರೆ.
ನಿನ್ನೆ ಮೈಸೂರು ರಸ್ತೆಯ ಕೆಂಗೇರಿ ಮುಖ್ಯರಸ್ತೆಯಲ್ಲಿ ಮಳೆ ನೀರು ಚರಂಡಿ ಹೋಗದೇ ರಸ್ತೆಯಲ್ಲಿ ನಿಂತಿತ್ತು. ಇದರಿಂದ ವಾಹನ ಸವಾರರು ಪರದಾಡುತ್ತಿದ್ದರು. ಈ ವೇಳೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ಟೇಬಲ್ ಪುಷ್ಟಾ ರಸ್ತೆಯಲ್ಲಿ ಸಂಗ್ರಹಗೊಂಡ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದಾರೆ. ಬ್ಲಾಕ್ ಆಗಿದ್ದ ಚರಂಡಿಯನ್ನು ಕೋಲಿನಿಂದ ತೆರವುಗೊಳಿಸಿ ವಾಹನ ಸವಾರರಿಗೆ ದಾರಿ ಮಾಡಿಕೊಟ್ಟಿದ್ದಾರೆ.
ರಭಸವಾಗಿ ಸುರಿಯುತ್ತಿದ್ದ ಮಳೆಯ ನಡುವೆ ಸಂಗ್ರಹಗೊಂಡ ಕಸವನ್ನು ಬದಿಗೆ ಸರಿಸಿ ನೀರು ಹರಿಯುವಂತೆ ಮಾಡಿದರು. ಇದರಿಂದ ವಾಹನ ಸವಾರರು ಸರಳವಾಗಿ ಓಡಾಡಿದರು. ಪುಷ್ಟಾ ಅವರ ಈ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಸಹ ಮಹಿಳಾ ಕಾನ್ಸ್ಟೇಬಲ್ ಪುಷ್ಟಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.