ಬೆಂಗಳೂರು : ಶಕ್ತಿ ಯೋಜನೆಯಡಿ ಮಹಿಳೆಯರು ಒಂದೇ ಬಾರಿ ತೆರಳುವುದು ಬೇಡ. ಇದರಿಂದ ಇತರ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ. ಈ ಸಂಬಂಧ 15 ದಿನ ನೋಡಿ, ಬಳಿಕ ಕೆಲವು ಬದಲಾವಣೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಜೂನ್ 11 ರಂದು 5 ಲಕ್ಷ 70 ಸಾವಿರ ಜನ ಓಡಾಡಿದ್ರು. ನಂತರ 40 ಲಕ್ಷ ಜನ, ಆಮೇಲೆ 3 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆದರೆ ಒಮ್ಮೆಲೆ ಹೋಗೋದು ಬೇಡ ಅಂತ ಮಹಿಳಾ ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ದೇವಸ್ಥಾನಕ್ಕೆ ಹೋಗಲು ಒಂದೇ ಸಲ ತೆರಳಿ ಬಸ್ ರಷ್ ಹೆಚ್ಚಾಗಿದೆ. ಈ ಕಾರ್ಯಕ್ರಮ ಐದು ವರ್ಷ ಇರಲಿದೆ. ಒಂದೇ ಬಾರಿಗೆ ಹೋಗಬೇಡಿ. ಆತಂಕಪಡುವ ಅಗತ್ಯ ಇಲ್ಲ. ಮತ್ತೆ ಚುನಾವಣೆ ನಡೆದ ಬಳಿಕ ಇನ್ನೂ 10 ವರ್ಷ ಕಾರ್ಯಕ್ರಮ ಇರಲಿದೆ. ಕೆಲ ಬಿಜೆಪಿ ನಾಯಕರು ಪ್ರಚೋದನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇರಲಿದೆ. ಒಂದೇ ದಿನದ ಬದಲಾಗಿ ಬೇರೆ ಬೇರೆ ದಿನ ಪ್ರಯಾಣ ಮಾಡಿ. ಹೆಚ್ಚು ಒತ್ತಡ ಇರಬಾರದು. ಇದರಿಂದ ವಿದ್ಯಾರ್ಥಿಗಳು, ಇತರರಿಗೆ ಸಮಸ್ಯೆ ಆಗುತ್ತದೆ ಎಂದು ಮನವಿ ಮಾಡಿದರು.
ವಾರದಲ್ಲಿ 70 ಕೋಟಿ ರೂ ಮೌಲ್ಯದ ಉಚಿತ ಟಿಕೆಟ್ ಪ್ರಯಾಣವಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಾರಂಭದಲ್ಲಿ ಈ ರೀತಿಯ ರಷ್ ಇರುತ್ತೆ. ಒಂದೇ ದಿನ ಧರ್ಮ ಕ್ಷೇತ್ರಕ್ಕೆ ಹೋಗ್ತಾರೆ. ಪ್ರತಿದಿನ ಹೋಗಲ್ಲ. ಪ್ರಾರಂಭದಲ್ಲಿ ಉತ್ಸಾಹದಿಂದ ಹೆಚ್ಚು ಪ್ರಯಾಣ ಮಾಡಿದ್ದಾರೆ. ಇನ್ಮೇಲೆ ಆರು ತಿಂಗಳ ನಂತರ ಪ್ರಯಾಣ ಮಾಡ್ತಾರೆ. ಜನರಿಗೆ ಬೇರೆ ಪ್ರಯಾಣಕರಿಗೆ ತೊಂದರೆ ಆಗಬಾರದು. ಎಷ್ಟು ಬಸ್ ಇದೆಯೋ ಅಷ್ಟೇ ಬಸ್ ಹೋಗ್ತಿದೆ ಎಂದರು.
ಖಾಸಗಿ ಬಸ್ಗಳಿಗೆ ನಷ್ಟವಾಗುತ್ತಿರುವ ಬಗ್ಗೆ ಮಾತನಾಡಿ, ಖಾಸಗಿ ಬಸ್ನವರೂ ಟ್ಯಾಕ್ಸ್ ಕಟ್ಟುತ್ತಾರೆ. ಅವರ ಜೀವನವೂ ನಡೆಯಬೇಕು. ಸದ್ಯ ಉತ್ಸಾಹದಲ್ಲಿ ಮಹಿಳೆಯರು ಪ್ರಯಾಣ ಬೆಳೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಲಿದೆ ನೋಡೋಣ ಎಂದು ಹೇಳಿದರು.
ಬಿಜೆಪಿ ಸಂಸದರದ್ದು ಜೀ ಹುಜೂರ್ ಸಂಸ್ಕೃತಿ: ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ರಾಮಲಿಂಗ ರೆಡ್ಡಿ, ಬಿಜೆಪಿಯವರು ಬರೀ ಉತ್ತರಕುಮಾರರು ಅಷ್ಟೇ. ಅವರದ್ದು ಜೀ ಹುಜೂರ್ ಸಂಸ್ಕೃತಿ. ಅವರು ತಿರುಪತಿ ತಿಮ್ಮಪ್ಪನ ಬಳಿ ಹೋಗಿ ದೇವರಿಗೆ ಕೈ ಮುಗಿದು ಬಂದಂತೆ, ಮೋದಿ ಮುಂದೆ ನಿಂತು ಕೈ ಮುಗಿದು ಬರ್ತಾರೆ ಅಷ್ಟೇ. ಅವರಿಗೆ ಮೋದಿ ಮುಂದೆ ನಿಂತು ಮಾತನಾಡುವ ಧಮ್ ತಾಕತ್ ಇಲ್ಲ. ಧಮ್ ಇದ್ದಿದ್ದು ಒಬ್ಬರಿಗೆ ಅದು ಯಡಿಯೂರಪ್ಪ ಅವರಿಗೆ. ಆದರೆ ಅವ್ರರನ್ನು ಇವಾಗ ಮನೆಗೆ ಕಳುಹಿಸಿಬಿಟ್ರು ಎಂದು ವಾಗ್ದಾಳಿ ನಡೆಸಿದರು.
ಅವರೇನು ಪುಕ್ಕಟೆ ಅಕ್ಕಿ ಕೊಡ್ತಾರಾ?: ಕಾಂಗ್ರೆಸ್ ಬಹಳ ಸ್ಪಷ್ಟವಾಗಿ 10 ಕೆಜಿ ಕೊಡ್ತೀವಿ ಅಂತ ಹೇಳಿದೆ. ನಾವು 10 ಕೆಜಿ ಅಕ್ಕಿ ಕೊಡುತ್ತೇವೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ 4 ಕೆ.ಜಿ ಇಳಿಸಿದ್ದಾರೆ. ಅವರಿಗೆ ಬಿಪಿಎಲ್ ಕಾರ್ಡ್ ಮೇಲೆ ಅನುಕಂಪ ಇರಲಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಕೇಳಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ರಾ? ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಯಾರದ್ದು ಬಿಜೆಪಿದಾ?. ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಆಡಳಿತ ಮಾಡ್ತಿದೆ ಅಷ್ಟೇ. 135 ಕೋಟಿ ಜನರ ಸರ್ಕಾರ ಅದು. ಪುಕ್ಕಟ್ಟೆ ಅಕ್ಕಿ ಕೊಡ್ತಾರಾ?. ಮಾರುಕಟ್ಟೆಯಿಂದ ಅಕ್ಕಿ ತಂದು ಕೊಡ್ತೀವಿ. ಮಾತಿಗೆ ತಪ್ಪೋಕೆ ನಾವೇನು ಬಿಜೆಪಿಯವರಾ?. ನಮ್ಮಲ್ಲಿ ಇರುವ ದೊಡ್ಡ ದೊಡ್ಡ ನಾಯಕರು ಕೇಂದ್ರ ಸರ್ಕಾರಕ್ಕೆ ಹೇಳಬೇಕು ಅಲ್ವಾ, ಕೊಡಿ ಅಂತ ಹೇಳಬೇಕು. ಅಕ್ಕಿ ಕೊಡಲಿಲ್ಲ ಪ್ರತಿಭಟನೆ ಮಾಡ್ತೀವಿ ಅಂತ ಬಿಜೆಪಿ ಹೇಳ್ತಾರೆ. ನಾಚಿಕೆ ಆಗಬೇಕು ಬಿಜೆಪಿಗೆ. 5 ಕೆ.ಜಿ ಅಕ್ಕಿ ಪುಕ್ಕಟ್ಟೆ ಕೊಡ್ತಿಲ್ಲ,ನಮ್ಮ ಟ್ಯಾಕ್ಸ್ ಹಣ ಹೋಗ್ತಿದೆ. ಬಿಜೆಪಿಗೆ ಇದೆಲ್ಲಾ ಗೊತ್ತಿಲ್ವಾ ಎಂದು ಕಿಡಿಕಾರಿದರು.
ಸಿಎಂ ಮುಂದುವರಿಕೆ ವಿಚಾರ..: ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಏನು ಎಂತೆಲ್ಲ ಹೈಕಮಾಂಡ್ ನಲ್ಲಿ ಚರ್ಚೆ ಆಗಿದೆ. ಅದು ನಮಗೂ ಗೊತ್ತಿಲ್ಲ. ಗೊತ್ತಿಲ್ಲದರ ಬಗ್ಗೆ ನಾವು ಮಾತಾಡಬಾರದು. ಮಹದೇವಪ್ಪ ಆಗಿರಬಹುದು, ಎಂ.ಬಿ. ಪಾಟೀಲ್ ಆಗಿರಬಹುದು ಅವರು ಮಾತಾಡಬಾರದು ಎಂದು ರಾಮಲಿಂಗರೆಡ್ಡಿ ಕಿವಿಮಾತು ಹೇಳಿದರು.
ಸಿಎಂ ವಿಷಯ ನಮ್ಮ ಮನೆಗೆ ಸಂಬಂಧಿಸಿದ್ದು. ನಮ್ಮ ಮನೆಯ ಬಗ್ಗೆ ಬಿಜೆಪಿಯವರಿಗೆ ಯಾಕೆ ಇಷ್ಟು ಚಿಂತೆ?. ಇದು ನಮ್ಮ ಪಕ್ಷದ ವಿಚಾರ ಹಾಗೂ ನಮಗೆ ಸಂಬಂಧಿಸಿದ ವಿಚಾರ. ಅವರಿಗೆ ಯಾಕೆ ಬೇಕು?. ನಾವು ಯಾರನ್ನಾದರೂ ಮಾಡಿಕೊಳ್ತೀವಿ. ಅದು ನಮ್ಮ ಮನೆಯ ವಿಚಾರ. ನಾಲ್ಕು ಗೋಡೆಗಳ ಒಳಗಡೆ ಮಾತನಾಡಬೇಕು. ಅವರು ಬಹಿರಂಗವಾಗಿ ಮಾತನಾಡಬಾರದು. ನಮ್ಮ ಲೆವೆಲ್ನಲ್ಲಿ ಮಾತಾಡುತ್ತೇವೆ. 5 ವರ್ಷ ಆದರೂ ಇರ್ತಾರೋ? ಅದು ಅವರಿಗೆ ಬಿಟ್ಟದ್ದು ಅಂತ ರಾಮಲಿಂಗ ರೆಡ್ಡಿ ತಡಬಡಿಸಿದರು.
ಇದನ್ನೂ ಓದಿ: ಭೂ ಖರೀದಿದಾರರಿಗೆ ಸದ್ಯದಲ್ಲೇ ಶಾಕ್: ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಚಿಂತನೆ.. ಸಚಿವ ಕೃಷ್ಣ ಭೈರೇಗೌಡ